ADVERTISEMENT

ಹಿರಿಯೂರು: ಸರ್ಕಾರಿ ಭೂಮಿ ದುರ್ಬಳಕೆ, ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 4:23 IST
Last Updated 28 ಡಿಸೆಂಬರ್ 2021, 4:23 IST
ಸರ್ಕಾರಿ ಭೂಮಿ ಕಬಳಿಸಿರುವ ಖಾಸಗಿ ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಿರಿಯೂರಿನಲ್ಲಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಭೂಮಿ ಕಬಳಿಸಿರುವ ಖಾಸಗಿ ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಿರಿಯೂರಿನಲ್ಲಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.   

ಹಿರಿಯೂರು: ‘ತಾಲ್ಲೂಕಿನಲ್ಲಿ ಖಾಸಗಿ ಕಂಪನಿಗಳು ರಾಜಸ್ವಧನ ಪಾವತಿಸದೆ ಸರ್ಕಾರಿ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

‘ದೆಹಲಿ ಮೂಲದ ಕಂಪನಿಯೊಂದು ತಾಲ್ಲೂಕಿನ ಹರ್ತಿಕೋಟೆ, ಹೇಮದಳ, ಬಾಲೇನಹಳ್ಳಿ, ಯರಬಳ್ಳಿ ಗ್ರಾಮಗಳ ಸರಹದ್ದಿನಲ್ಲಿರುವ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಂಬಗಳನ್ನು ನೆಟ್ಟು, ಕಾರಿಡಾರ್ ನಿರ್ಮಿಸಿದೆ. ಈ ಬಗ್ಗೆ ಹಲವು ರೀತಿಯ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ಒತ್ತುವರಿ ತೆರವು ಮಾಡಬೇಕು. ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದರು.

‘ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ರಸ್ತೆ ನಿರ್ಮಾಣಕ್ಕೆ ಸರ್ಕಾರಿ ಜಮೀನಿನಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿದ್ದಾರೆ. ಮತ್ತೆ ಕೆಲವರು ಇಲಾಖೆ ಗಮನಕ್ಕೆ ತರದೇ ಕೆರೆಯ ಮಣ್ಣನ್ನು ಬಳಸುತ್ತಿದ್ದಾರೆ. ಕೆರೆಯ ಹೂಳನ್ನು ರೈತರ ಜಮೀನುಗಳಿಗೆ ಮಾತ್ರ ಬಳಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅನಿರ್ದಿಷ್ಟ ಧರಣಿ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ADVERTISEMENT

ಆಲೂರು ಸಿದ್ದರಾಮಣ್ಣ, ವೈ. ಶಿವಣ್ಣ, ಎ. ವಿರೂಪಾಕ್ಷಪ್ಪ, ಎಂ. ತಿಮ್ಮಾರೆಡ್ಡಿ, ಅರಳೀಕೆರೆ ತಿಪ್ಪೇಸ್ವಾಮಿ, ಬಿ. ರಂಗಸ್ವಾಮಿ, ನಂದಿಹಳ್ಳಿ ರಂಗಸ್ವಾಮಿ, ದೇವೇಂದ್ರಪ್ಪ, ಆಲೂರು ವೀರಣ್ಣಗೌಡ, ಎಚ್. ರಂಗಸ್ವಾಮಿ, ಸುರೇಶ್, ಮಹಾಂತೇಶ್, ಚಂದ್ರಗಿರಿ, ದಿಂಡಾವರ ವಿರೂಪಾಕ್ಷಪ್ಪ, ಆಲೂರು ರಾಮಣ್ಣ, ಶಿವಣ್ಣ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.