ADVERTISEMENT

ಚೀಟಿ ಇಲ್ಲದಿದ್ದರೂ ಪಡಿತರ ನೀಡಿ: ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 13:03 IST
Last Updated 13 ಏಪ್ರಿಲ್ 2020, 13:03 IST
ಗೋವಿಂದ ಎಂ.ಕಾರಜೋಳ
ಗೋವಿಂದ ಎಂ.ಕಾರಜೋಳ   

ಚಿತ್ರದುರ್ಗ: ಲಾಕ್‌ಡೌನ್‌ ಸಂದರ್ಭದಲ್ಲಿ ಅತಂತ್ರರಾಗಿರುವ ಕಾರ್ಮಿಕರು, ನಿರ್ಗತಿಕರಿಗೆ ಪಡಿತರ ಚೀಟಿ ಇಲ್ಲದಿದ್ದರೂ ಧಾನ್ಯ ವಿತರಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸೂಚನೆ ನೀಡಿದರು.

ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿಯನ್ನು ಪಡಿತರ ವಿತರಣೆಯಲ್ಲಿ ಉಂಟಾಗಿರುವ ತೊಂದರೆಯ ಬಗ್ಗೆ ಸುದ್ದಿಗಾರರು ಗಮನ ಸೆಳೆದರು. ತಕ್ಷಣ ದೂರವಾಣಿ ಮೂಲಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚೆ ನಡೆಸಿದ ಕಾರಜೋಳ, ವಲಸೆ ಕಾರ್ಮಿಕರು ಮತ್ತು ಅಲೆಮಾರಿಗಳಿಗೆ ತಾತ್ಕಾಲಿಕ ಚೀಟಿ ನೀಡುವಂತೆ ತಾಕೀತು ಮಾಡಿದರು.

‘ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲಿಗಿ ಜಮಾತ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಅನೇಕರು ಆರೋಗ್ಯ ತಪಾಸಣೆಗೆ ಮುಂದಾಗುತ್ತಿಲ್ಲ. ವಿದೇಶ ಹಾಗೂ ಹೊರ ರಾಜ್ಯಗಳಿಗೆ ಭೇಟಿ ನೀಡಿದವರು ಕೂಡ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳಬಹುದೇ ಹೊರತು ಹೆಚ್ಚಿನದೇನು ಮಾಡಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಕೊರೊನಾ ಸೋಂಕಿನಿಂದ ತೊಂದರೆ ಅನುಭವಿಸುತ್ತಿದೆ. ಪ್ರಪಂಚಕ್ಕೆ ಇದೊಂದು ಗಂಡಾಂತರ ಸಮಯ. ರಾಜ್ಯದಲ್ಲಿ ಇನ್ನೂರಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ಅಂಟಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕತೆಗೆ ತೊಂದರೆ ಉಂಟಾಗಿದ್ದು, ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಆದರೂ, ಜನರು ಸಹಕರಿಸುತ್ತಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿ ಹೊರಗೆ ಬರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸೋಂಕು ಹರಡದಂತೆ ತಡೆಯಲು ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಅಡಚಣೆ ಉಂಟು ಮಾಡುವುದು ತಪ್ಪು. ವೈದ್ಯರು, ಶುಶ್ರೂಷಕಿಯರು ಹಾಗೂ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸೋಂಕು ತಡೆಗೆ 19.83 ಲಕ್ಷ ಎನ್‌95 ಮಾಸ್ಕ್‌ಗಳನ್ನು ಖರೀದಿ ಮಾಡಲಾಗಿದೆ. ಆರು ಲಕ್ಷಕ್ಕೂ ಹೆಚ್ಚು ಮಾಸ್ಕ್‌ಗಳು ಈಗಾಗಲೇ ಪೂರೈಕೆ ಆಗಿವೆ. ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ 10 ಲಕ್ಷ ಪಿಪಿಇ ಕಿಟ್‌ಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸುಮಾರು ಮೂರು ಲಕ್ಷದಷ್ಟು ಪಿಪಿಇ ಕಿಟ್‌ ಪೂರೈಕೆ ಆಗಿವೆ. 1,584 ವೆಂಟಿಲೇಟರ್‌ಗಳ ಖರೀದಿಗೆ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾ ಸೋಂಕು ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.