ADVERTISEMENT

ಕೊರತೆಗಳಿಂದ ಬಸವಳಿದ ಕರಿಯಾಲ ಸರ್ಕಾರಿ ಶಾಲೆ

ಕರಿಯಾಲ, ಮರಡಿಹಟ್ಟಿ, ಕರಿಯಾಲ ಗೊಲ್ಲರಹಟ್ಟಿ, ಓಣಿಹಟ್ಟಿಗಳ ವಿದ್ಯಾರ್ಥಿಗಳಿಗೆ ಹತ್ತಿರದಲ್ಲಿರುವ ಏಕಮಾತ್ರ ಶಾಲೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 5:09 IST
Last Updated 7 ಜನವರಿ 2022, 5:09 IST
ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಯ ಹೆಂಚುಗಳು ಹಾಳಾಗಿರುವುದು (ಎಡಚಿತ್ರ). ಶಾಲಾ ಕೊಠಡಿಗಳು ಶಿಥಿಲವಾಗಿರುವ ಕಾರಣ ವರಾಂಡದಲ್ಲಿ ಬೋಧನೆ ನಡೆಯುತ್ತಿರುವುದು.
ಹಿರಿಯೂರು ತಾಲ್ಲೂಕಿನ ಕರಿಯಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಯ ಹೆಂಚುಗಳು ಹಾಳಾಗಿರುವುದು (ಎಡಚಿತ್ರ). ಶಾಲಾ ಕೊಠಡಿಗಳು ಶಿಥಿಲವಾಗಿರುವ ಕಾರಣ ವರಾಂಡದಲ್ಲಿ ಬೋಧನೆ ನಡೆಯುತ್ತಿರುವುದು.   

ಹಿರಿಯೂರು:‘ತಲೆ ಎತ್ತಿ ನೋಡಿದರೆ ಮುರಿದು ಹೋದ ಹೆಂಚುಗಳ ನಡುವೆ ತೂರಿ ಬರುವ ಸೂರ್ಯನ ರಶ್ಮಿ, ಮಳೆ ಬಂದರೆ ಸೋರದೇ ಇರುವ ಜಾಗಕ್ಕಾಗಿ ಹುಡುಕಾಟ. ಮುಚ್ಚಿದರೆ ತೆಗೆಯಲು ಬಾರದ, ತೆಗೆದರೆ ಮುಚ್ಚಲು ಆಗದ ಕಿಟಕಿಗಳು, ಕಾಂಪೌಂಡ್ ಇಲ್ಲದ, ಗಿಡಗಂಟಿಗಳಿಂದ ಆವೃತವಾದ ಶೌಚಾಲಯ. ಇಷ್ಟು ಸಾಲದು ಎಂಬಂತೆ ಎಂಟು ತರಗತಿಗಳಿಗೆ ಬೋಧಿಸಲು ಮಂಜೂರಾಗಿದ್ದ ಐವರು ಶಿಕ್ಷಕರಲ್ಲಿ ಕರ್ತವ್ಯದಲ್ಲಿರುವುದು ಕೇವಲ ಇಬ್ಬರು ಮಾತ್ರ’.

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ಕೇಂದ್ರದಿಂದ 5 ಕಿ.ಮೀ. ದೂರದಲ್ಲಿರುವ ಕರಿಯಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು.

1955–56ರಲ್ಲಿ ಆರಂಭಗೊಂಡ ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಎಂಟನೇ ತರಗತಿಯವರೆಗೆ ಕಲಿಕೆಗೆ ಅವಕಾಶವಿದೆ. ಕರಿಯಾಲ, ಮರಡಿಹಟ್ಟಿ, ಕರಿಯಾಲ ಗೊಲ್ಲರಹಟ್ಟಿ ಹಾಗೂ ಓಣಿಹಟ್ಟಿಗಳ ವಿದ್ಯಾರ್ಥಿಗಳಿಗೆ ಕಲಿಕೆಗೆ ಹತ್ತಿರದಲ್ಲಿರುವ ಏಕಮಾತ್ರ ಶಾಲೆಯಿದು. ಊರಿನ ಮಕ್ಕಳಿಗೆ ಅಕ್ಷರ ಜ್ಞಾನ ದೊರೆಯಲಿ ಎಂಬ ಕಾರಣಕ್ಕೆ ಓಣಿಹಟ್ಟಿಯ ಚಿತ್ತಪ್ಪ ಎಂಬುವರು ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಆರಂಭದಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಆರು ಕೊಠಡಿಗಳಲ್ಲಿ ಬೋಧನೆ ನಡೆಯುತ್ತಿತ್ತು. ಪ್ರಸ್ತುತ ಶಾಲೆಯನ್ನು ಎಂಟನೇ ತರಗತಿಗೆ ಮೇಲ್ದರ್ಜೆಗೆ ಏರಿಸಿದ್ದು, ಕೊಠಡಿಗಳು ಮಾತ್ರ ಅಷ್ಟೇ ಇವೆ.

ADVERTISEMENT

‘ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ 98 ಮಕ್ಕಳಿದ್ದಾರೆ. ಐವರು ಶಿಕ್ಷಕರು ಇರಬೇಕಾದ ಕಡೆ ಇಬ್ಬರು ಮಾತ್ರ ಇದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಪಾಪಣ್ಣ ಅವರು ತಮ್ಮ ಅನುದಾನದಲ್ಲಿ ನಾಲ್ಕು ವರ್ಷಗಳ ಹಿಂದೆ ಶಾಲೆಗೆ ಬಣ್ಣ ಹೊಡೆಸಿ, ಕುಡಿಯುವ ನೀರಿಗೆ ತೊಟ್ಟಿ ನಿರ್ಮಿಸಿ ಕೊಟ್ಟಿದ್ದರು. ಅದನ್ನು ಬಿಟ್ಟರೆ ಬೇರೆ ಯಾವುದೇ ಅನುದಾನ ಈ ನತದೃಷ್ಟ ಶಾಲೆಗೆ ಸಿಕ್ಕಿಲ್ಲ. ಆರು ಕೊಠಡಿಗಳಲ್ಲಿ ಒಂದನ್ನು ಮಾತ್ರ ಅಲ್ಪಸ್ವಲ್ಪ ದುರಸ್ತಿ ಮಾಡಿದ್ದು, ಮೂರು ತುಂಬಾ ಶಿಥಿಲವಾಗಿವೆ. ಅವುಗಳಲ್ಲಿ ಮಕ್ಕಳನ್ನು ಕೂರಿಸುತ್ತಿಲ್ಲ. ಇನ್ನೆರಡು ಹಾಳಾಗಿವೆ. ಪಾಳಿಯ ಮೇಲೆ ಮಕ್ಕಳನ್ನು ಶಾಲೆಯ ಹೊರ ಆವರಣದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮಣ್ಣ ಆರೋಪಿಸಿದ್ದಾರೆ.

‘ನಮ್ಮ ತಾಲ್ಲೂಕಿನಲ್ಲಿಯೇ ಕೆಲವು ಸರ್ಕಾರಿ ಶಾಲೆಗಳಿಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಲಾಗಿದೆ. ಮತ್ತೆ ಕೆಲವು ಶಾಲೆಗಳು ಕುಸಿಯುವಂತೆ ಇದ್ದರೂ ಜನಪ್ರತಿನಿಧಿಗಳು ಕಣ್ಣೆತ್ತಿ ನೋಡುತ್ತಿಲ್ಲ. ದಾನಿಗಳ ನೆರವಿನಿಂದ 65 ವರ್ಷಗಳ ಹಿಂದೆ ಆರಂಭಗೊಂಡ ಶಾಲೆ ಹಾಳಾಗುತ್ತಿರುವುದು, ಶಿಕ್ಷಕರಿಲ್ಲದೇ ಬಣಗುಡುವುದು ಬೇಸರದ ಸಂಗತಿ. ಕೂಲಿಯನ್ನೇ ನಂಬಿರುವ ಈ ಭಾಗದ ಪೋಷಕರು ಹೊಟ್ಟೆಬಟ್ಟೆ ಕಟ್ಟಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಐದಾರು ಕಿ.ಮೀ. ದೂರದ ಜವನಗೊಂಡನಹಳ್ಳಿಗೆ ಕಳಿಸುತ್ತಿದ್ದಾರೆ. ಶಾಲೆಯನ್ನು ಹೊಸದಾಗಿ ಮರುನಿರ್ಮಿಸಿದಲ್ಲಿ ನೂರಾರು ಬಡ ಮಕ್ಕಳಿಗೆ ಅನುಕೂಲವಾಗುತ್ತದೆ’ ಎಂದು ರಾಮಣ್ಣ ಹೇಳುತ್ತಾರೆ.

‘ಪ್ರಸ್ತುತ ಇರುವ ಕಟ್ಟಡವನ್ನು ನೆಲಸಮಗೊಳಿಸಿ, ಗ್ರಂಥಾಲಯ, ಪ್ರಯೋಗಾಲಯ ಹೊಂದಿರುವ ಹೊಸ ಕಟ್ಟಡ, ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ, ಕಾಂಪೌಂಡ್, ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಐದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದ ವ್ಯವಸ್ಥೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

...

ಪ್ರಕೃತಿ ವಿಕೋಪ ನಿಧಿಯಡಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಅನುದಾನ ಮಂಜೂರಾಗಿ ಬಂದ ತಕ್ಷಣ ಎರಡು ಕೊಠಡಿಗಳನ್ನು ನಿರ್ಮಿಸುತ್ತೇವೆ

-ನಾಗಭೂಷಣ್, ಕ್ಷೇತ್ರ ಶಿಕ್ಷಣಾಧಿಕಾರಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.