ಚಳ್ಳಕೆರೆ: ತಾಲ್ಲೂಕಿನ ಬೇಡರೆಡ್ಡಿಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಅಬ್ಬೇನಹಳ್ಳಿ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮಾಡುವಂತೆ ಆಗ್ರಹಿಸಿ ತಾಲ್ಲೂಕು ರೈತ ಸಂಘ, ದಲಿತ ಸಂಘಟನೆ ಕಾರ್ಯಕರ್ತರು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಘಟಕದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ‘ತಾಲ್ಲೂಕಿನ ಅಬ್ಬೇನಹಳ್ಳಿ ಪಂಚಾಯಿತಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ₹35 ಲಕ್ಷ ಮತ್ತು ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಂದೇ ಅಂಗಡಿ ಹೆಸರಿನಲ್ಲಿ ₹40 ಲಕ್ಷ ಅವ್ಯವಹಾರ ನಡೆದಿರುವ ಬಗ್ಗೆ ನೂರಾರು ಪುಟದ ದಾಖಲೆಯೊಂದಿಗೆ ಆಡಿಯೊ, ವೀಡಿಯೊ ಸಹಿತ ಅಗತ್ಯ ದಾಖಲೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ವರದಿ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಮರ್ಲೆಹಳ್ಳಿ ರವಿಕುಮಾರ್ ಮಾತನಾಡಿ, ‘ಗ್ರಾಮ ಪಂಚಾಯಿತಿಯ ವಿವಿಧ ಯೋಜನೆಗಳ ಅನುದಾನದ ಸಾಕಷ್ಟು ದುರ್ಬಳಕೆ ಆಗಿದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಾಖಲೆ ಸಹಿತ ದೂರು ನೀಡಿದ್ದರೂ ಅದನ್ನು ಸುಳ್ಳು ದಾಖಲೆ ಎಂದು ಗ್ರಾಮಾಭಿವೃದ್ಧಿ ಅಧಿಕಾರಿಗಳು ಬಿಂಬಿಸುತ್ತಿದ್ದಾರೆ. ಹೀಗಾಗಿ, ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಬಳಕೆಯಾದ ಅನುದಾನವನ್ನು ಕುಲಂಕಷವಾಗಿ ಪರಿಶೀಲಿಸಬೇಕು. ಅವ್ಯವಹಾರ ಸಾಬೀತು ಆದಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಹಿರೇಹಳ್ಳಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ರಾಮಾಂಜಿನಪ್ಪ, ಸೂರಮ್ಮನಹಳ್ಳಿ ರಾಜಣ್ಣ, ಬೇಡರೆಡ್ಡಿಹಳ್ಳಿ ಪ್ರಶಾಂತರೆಡ್ಡಿ, ಎಂ.ಗಂಗಾಧರ, ಡಿಎಸ್‍ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಹಿರೇಹಳ್ಳಿ ಎಸ್.ರಾಜಣ್ಣ ಮಾತನಾಡಿದರು.
ಮನವಿ ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಒ ಎಚ್.ಶಶಿಧರ್ ಕಾರ್ಯಕರ್ತರಿಗೆ ಭರವಸೆ ನೀಡಿದರು. ವಕೀಲ ಆರ್.ರುದ್ರಮುನಿ, ಹಿರೇಹಳ್ಳಿ ಏಕಾಂತಪ್ಪ, ನಾಗರಾಜ, ಮಂಜುನಾಥ ಇದ್ದರು.