ADVERTISEMENT

ಸಾಲ ಮನ್ನಾ, ಬೆಳೆ ಪರಿಹಾರಕ್ಕೆ ಆಗ್ರಹ

ಚಳ್ಳಕೆರೆ: ರೈತ ಸಂಘದ ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 3:23 IST
Last Updated 28 ಅಕ್ಟೋಬರ್ 2025, 3:23 IST
ಚಳ್ಳಕೆರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ವಿವಿಧ ಸಂಘಟನೆ ಕಾರ್ಯಕರ್ತರು ಸೋಮವಾರ ನಗರದ ನೆಹರೂ ಸರ್ಕಲ್‍ನಲ್ಲಿ ಮಾನವ ಸರಳಿ ನಿರ್ಮಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ವಿವಿಧ ಸಂಘಟನೆ ಕಾರ್ಯಕರ್ತರು ಸೋಮವಾರ ನಗರದ ನೆಹರೂ ಸರ್ಕಲ್‍ನಲ್ಲಿ ಮಾನವ ಸರಳಿ ನಿರ್ಮಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.   

ಚಳ್ಳಕೆರೆ: ಶೇಂಗಾ ಬೆಳೆ ಪರಿಹಾರ, ಬೆಳೆ ವಿಮೆ, ಬಗರ್‌ಹುಕುಂ ಸಾಗುವಳಿ ಪತ್ರ, ಸಾಲ ಮನ್ನಾ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಹಸಿರು ಸೇನೆ ಮತ್ತು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದ ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ನಂತರ ತಾಲ್ಲೂಕು ಕಚೇರಿಗೆ ತೆರಳಿ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.

ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ‘ಮಳೆ ಕೊರತೆಯಿಂದ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಂಪೂರ್ಣ ವಿಫಲವಾಗಿದ್ದು, ರೈತ ಸಮುದಾಯ ತೀವ್ರ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ, ಬೆಳೆ ನಷ್ಟ ಅನುಭವಿಸಿದ ಎಲ್ಲ ರೈತರಿಗೆ ಎಕರೆಗೆ ಅನುಗುಣವಾಗಿ ಕೂಡಲೇ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ರಾಷ್ಟ್ರೀಯ ಬ್ಯಾಂಕ್‌ನಲ್ಲಿರುವ ರೈತರ ಬೆಳೆಸಾಲ ಮನ್ನಾ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕು’ ಎಂದು ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಣ್ಣ ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ರೈತರಿಂದ ಮನವಿ ಸ್ವೀಕರಿಸಿದ ಶಾಸಕ ಟಿ.ರಘುಮೂರ್ತಿ, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ತಾಲ್ಲೂಕಿನ ಅಗತ್ಯ ಬೇಡಿಕೆಗಳ ಕುರಿತು ಚರ್ಚಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.

ತಹಶೀಲ್ದಾರ್ ರೇಹಾನ್ ಪಾಷ, ತೊಗರಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮೀರಾಸಾಬಿಹಳ್ಳಿ ಸಿ.ಶಿವಲಿಂಗಪ್ಪ, ರೈತ ಸಂಘದ ಗೌರವಾಧ್ಯಕ್ಷ ಶಾಂತಣ್ಣ, ಉಪಾಧ್ಯಕ್ಷ ತಿಮ್ಮಣ್ಣ, ಪರಶುರಾಂಪುರ ಜಂಪಣ್ಣ, ಚೌಳೂರು ಪ್ರಕಾಶ್ ಮಾತನಾಡಿದರು.

ರೈತ ಮುಖಂಡ ಹನುಮಂತರಾಯ, ನರಸಿಂಹಮೂರ್ತಿ, ಶಂಕ್ರಮ್ಮ, ಹೊನ್ನಪ್ಪ, ರಾಜಣ್ಣ, ಮಂಜುನಾಥ, ವೆಂಕಟೇಶ್, ಬಂಡೆ ತಿಪ್ಪೇಸ್ವಾಮಿ, ಚನ್ನಕೇಶವ, ರೈತ ಮಹಿಳೆ ಲಕ್ಷ್ಮೀದೇವಿ, ಜಯಮ್ಮ, ನಿಂಗಮ್ಮ, ಸುಮಿತ್ರಮ್ಮ ಇದ್ದರು.

ಚಳ್ಳಕೆರೆ ರೈತ ಸಂಘದ ಕಾರ್ಯಕರ್ತರು ಸೋಮವಾರ ಶಾಸಕ ಟಿ.ರಘುಮೂರ್ತಿಯವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.