ADVERTISEMENT

ಜಿಎಸ್‌ಟಿ ಅನುದಾನ: ಕೇಂದ್ರದಿಂದ ತಾರತಮ್ಯ

ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 12:57 IST
Last Updated 7 ಸೆಪ್ಟೆಂಬರ್ 2020, 12:57 IST
ನಾಯಕನಹಟ್ಟಿಯ ಸಮೀಪದ ತಳಕು ಗ್ರಾಮದಲ್ಲಿ ಸೋಮವಾರ ಬ್ಲಾಕ್ ‌ಕಾಂಗ್ರೆಸ್‌ನಿಂದ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿದರು
ನಾಯಕನಹಟ್ಟಿಯ ಸಮೀಪದ ತಳಕು ಗ್ರಾಮದಲ್ಲಿ ಸೋಮವಾರ ಬ್ಲಾಕ್ ‌ಕಾಂಗ್ರೆಸ್‌ನಿಂದ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿದರು   

ನಾಯಕನಹಟ್ಟಿ: ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ಜಿಎಸ್‌ಟಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ದೂರಿದರು.

ತಳಕು ಗ್ರಾಮದಲ್ಲಿ ಸೋಮವಾರ ಬ್ಲಾಕ್ ‌ಕಾಂಗ್ರೆಸ್‌ನಿಂದ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾ ಸಂಕಷ್ಟದ ಸಮಯದಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದೆ. ಜಿಎಸ್‌ಟಿ ತೆರಿಗೆ ಹಂಚಿಕೆ, ರಾಜ್ಯಕ್ಕೆ ಆರೋಗ್ಯ ಸಲಕರಣೆಗಳ ಹಂಚಿಕೆ, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಇತಿಹಾಸದಲ್ಲೇ ಮೊದಲಬಾರಿಗೆ ರಾಷ್ಟ್ರದ ಜಿಡಿಪಿ ಶೇ 32.9ರಷ್ಟು ಕುಸಿದಿದೆ. ಇಷ್ಟಾದರೂ ದೇಶದ ಅರ್ಥವ್ಯವಸ್ಥೆಗೆ ಚೇತರಿಕೆ ತುಂಬುವ ಯೋಜನೆಗಳ ಬಗ್ಗೆ ಆಲೋಚಿಸುತ್ತಿಲ್ಲ. ಕೊರೊನಾ ತಡೆಗಟ್ಟುವಲ್ಲಿ ವಿಫಲರಾಗಿ ಕೊರೊನಾ ರೋಗಕ್ಕೆ ಲಸಿಕೆ ಕಂಡು ಹಿಡಿಯುವಲ್ಲಿಯೂ ವಿಫಲರಾಗಿದ್ದಾರೆ. ರಾಜ್ಯದ 25 ಜನ ಬಿಜೆಪಿ ಸಂಸದರು ಮೋದಿಯವರ ಬಳಿ ನಿಯೋಗ ತೆರಳಿ ರಾಜ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸುವಲ್ಲಿಯೂ ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ ಮೋದಿಯವರು ಏಕಚಕ್ರಾಧಿಪತ್ಯ ಆಡಳಿತ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಬಿ. ಯೋಗೀಶ್‌ಬಾಬು, ‘ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಕ್ರಮಗಳ ಬಗ್ಗೆ ಗಮನಹರಿಸದೆ ವಿಫಲರಾಗಿದ್ದಾರೆ. ಮೊಳಕಾಲ್ಮುರು ಕ್ಷೇತ್ರದಲ್ಲಿ ಕೊರೊನಾ ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್‌ಗಳ ಕೊರತೆ ಹೆಚ್ಚಿದೆ. ರೋಗಿಗಳು ಸೂಕ್ತ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಆದರೂ ಆರೋಗ್ಯ ಸಚಿವರು ಕ್ಷೇತ್ರದ ಜನರ ಬಗ್ಗೆ, ಅವರ ಬವಣೆಗಳ ಬಗ್ಗೆ ಕಿಂಚಿತ್ತು ಆಲೋಚಿಸದೆ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ವಿಧಾನ ಪರಿಷತ್‌ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ತಾಜ್‌ಪೀರ್, ನಾಗೇಶ್‌ರೆಡ್ಡಿ, ಪಟೇಲ್ ‌ಪಾಪನಾಯಕ, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಸೂರಮ್ಮ ಮಂಜಣ್ಣ, ಬೊಮ್ಮಕ್ಕ, ಚಿತ್ತಪ್ಪ, ದೇವಪುತ್ರ, ಅಣ್ಣಪ್ಪ, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.