ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಬುಧವಾರ ನಡೆದ ‘ಗೈಡಿಂಗ್ ಫೋರ್ಸ್’ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಡಿಐಜಿ ರವಿ ಡಿ.ಚನ್ನಣ್ಣನವರ್ ಮಾತನಾಡಿದರು.
ಚಿತ್ರದುರ್ಗ: ಪಿಯುಸಿ, ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಬೇಕೆಂಬ ಹಂಬಲವಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು ಎಂಬ ಛಲವಿತ್ತು. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಿನ ಏಣಿ ಏರುವ ಬಗೆ ಅರಿತಾಗ ಪ್ರತಿಯೊಬ್ಬರ ಮೊಗ ಆತ್ಮವಿಶ್ವಾಸದಿಂದ ಅರಳಿದ್ದವು.
ಇಂತಹದ್ದೊಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ನಗರದ ತರಾಸು ರಂಗಮಂದಿರ. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ‘ಸ್ಪರ್ಧಾವಾಣಿ’ ಹಾಗೂ ‘ಮಾಸ್ಟರ್ ಮೈಂಡ್’ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ಗೈಡಿಂಗ್ ಫೋರ್ಸ್’ ಇದಕ್ಕೆ ವೇದಿಕೆ ಒದಗಿಸಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದು ಸೇರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಡಿಐಜಿ ರವಿ ಡಿ.ಚನ್ನಣ್ಣನವರ್ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ರೀತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಗ್ರಾಮೀಣ ಪ್ರದೇಶದ ಹಿನ್ನೆಲೆ, ಬಡತನದ ಬೇಗೆ, ಬದುಕಿನ ಅನುಭವಗಳನ್ನು ಮುಂದಿಡುತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾದ ರೀತಿಯನ್ನು ವಿವರಿಸಿದರು.
ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆ, ಬ್ಯಾಂಕಿಂಗ್ ಸೇರಿ ಎಲ್ಲ ಪರೀಕ್ಷೆ ಎದುರಿಸುವ ಸಂಕಲ್ಪ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪಠ್ಯ, ಪರೀಕ್ಷಾ ಪತ್ರಿಕೆಗಳ ಸಂಗ್ರಹ, ಓದುವ ಸಾಮಗ್ರಿ ಕಲೆಹಾಕುವುದೂ ಸೇರಿದಂತೆ ಹಲವು ಗುಟ್ಟುಗಳನ್ನು ಮನದಟ್ಟು ಮಾಡಿಕೊಟ್ಟರು.
ದಾವಣಗೆರೆ ಬ್ಯೂರೊ ಪ್ರಸರಣ ವಿಭಾಗದ ವ್ಯವಸ್ಥಾಪಕ ನಂದಗೋಪಾಲ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಸುಬ್ರಾನಾಯಕ್ ಇದ್ದರು.
ಎನ್‌ಸಿಇಆರ್‌ಟಿ ಪಠ್ಯವನ್ನು ಸರಿಯಾಗಿ ಅಧ್ಯಯನ ಮಾಡಬೇಕು. ನಿತ್ಯ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಸ್ಪರ್ಧಾವಾಣಿ ಯೋಜನಾ ಕುರುಕ್ಷೇತ್ರ ಪತ್ರಿಕೆ ಓದಿ.–ರವಿ ಡಿ.ಚನ್ನಣ್ಣನವರ್, ಡಿಐಜಿ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.