
ನಾಯಕನಹಟ್ಟಿ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆಯನ್ನು ಯಾವುದೇ ಲೋಪಗಳಿಲ್ಲದೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯದ ಮುಂಭಾಗ ಸೋಮವಾರ ಜಿಲ್ಲಾಡಳಿತದಿಂದ ನಡೆದ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾಜಾತ್ರೆಯ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದ ಹಲವು ಜಿಲ್ಲೆಗಳು ಸೇರಿ ನೆರೆ– ಹೊರೆಯ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಸಣ್ಣ ಲೋಪದೋಷ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಬೇಕು. ಭಕ್ತರಿಗೆ ಕುಡಿಯುವ ನೀರು, ಸ್ವಚ್ಛತೆ ಮತ್ತು ತುರ್ತು ವೈದ್ಯಕೀಯ ಸೇವೆಗಳಲ್ಲಿ ಯಾವುದೇ ಕೊರತೆ ಆಗದಂತೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಜಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು’ ಎಂದು ತಾಕೀತು ಮಾಡಿದರು.
ಶಾಸಕ ಎನ್.ವೈ.ಗೋಪಾಲಕೃಷ್ಣ, ‘ಜಾತ್ರೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬ್ಯಾನರ್ ಮತ್ತು ಬಂಟಿಗ್ಸ್ ಅಳವಡಿಸಿ ಪಟ್ಟಣದ ಅಂದಗೆಡಿಸುವುದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾಗೇ ಸಚಿವರು, ಚಳ್ಳಕೆರೆ, ಚಿತ್ರದುರ್ಗದ ಶಾಸಕರು ತಮ್ಮ ಕೋಟಾದಡಿ ನಾಯಕನಹಟ್ಟಿ ಜಾತ್ರೆಗೆ ತಲಾ ₹ 10 ಲಕ್ಷ ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ, ‘ತಕ್ಷಣವೇ ನನ್ನ ಅನುದಾನದಲ್ಲಿ ₹ 10 ಲಕ್ಷ ಮೊತ್ತವನ್ನು ಜಾತ್ರೆಗೆ ನೀಡಲು ಜಿಲ್ಲಾಧಿಕಾರಿಗೆ ಪತ್ರ ನೀಡುತ್ತೇನೆ’ ಎಂದು ಭರವಸೆ ನೀಡಿದರು.
‘ನಾಯಕನಹಟ್ಟಿ ಪಟ್ಟಣವನ್ನು ಸಂಪರ್ಕಿಸುವ ವಿವಿಧ ರಸ್ತೆಗಳಲ್ಲಿ ತಗ್ಗು ಗುಂಡಿಗಳಿದ್ದು, ಲೋಕೋಪಯೋಗಿ ಇಲಾಖೆಯವರು ಈ ರಸ್ತೆಗಳಲ್ಲಿನ ಗುಂಡಿಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಜಾತ್ರೆ ವೇಳೆಗೆ ಎಲ್ಲ ರಸ್ತೆಗಳು ಅಚ್ಚುಕಟ್ಟಾಗಿರಬೇಕು’ ಎಂದು ಸೂಚನೆ ನೀಡಿದರು.
‘ಐತಿಹಾಸಿಕ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ, ಮದ್ಯ ಅಕ್ರಮ ಮಾರಾಟ ನಿಷೇಧ, ಹೆಚ್ಚುವರಿ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ನೈರ್ಮಲ್ಯ ಕಾಪಾಡುವುದು, ಆರೋಗ್ಯ ಸೇವೆಗಳು, ವೈದ್ಯರು, ಔಷಧೋಪಚಾರಗಳ ವ್ಯವಸ್ಥೆ, ಅಗ್ನಿಶಾಮಕ ದಳದ ವ್ಯವಸ್ಥೆ, ಸಾರಿಗೆ ಸಂಪರ್ಕ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡ್‌ಗಳ ವ್ಯವಸ್ಥೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಗೆ ಮಾಹಿತಿ ನೀಡಿದರು.
‘ದೇಗುಲದ ಬಳಿ ದೇವರ ದರ್ಶನಕ್ಕೆ ಉಂಟಾಗುವ ಸರದಿ ಸಾಲುಗಳಿಗೆ ಪರಿಹಾರವಾಗಿ ಹಳೇ ದಾಸೋಹ ಭವನ ತೆರವುಗೊಳಿಸಿ ಅಲ್ಲಿಯೇ ಸಕ್ರ್ಯುಲರ್ ಕ್ಯೂ ಲೈನ್ ನಿರ್ಮಿಸುವುದು, ಶಾಶ್ವತ ಮತ್ತು ತಾತ್ಕಲಿಕ ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ರಸ್ತೆ ಬದಿಗಳಲ್ಲಿ ಜಂಗಲ್ ಕಟಿಂಗ್ ಮಾಡಬೇಕು. ರಥ ಸಾಗುವ ದಾರಿಯಲ್ಲಿರುವ ಅತಿಕ್ರಮ ಒತ್ತುವರಿಗಳನ್ನು ತೆರವುಗೊಳಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ನಿರ್ವಹಿಸಲು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಮೇಲ್ವೀಚಾರಣೆಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ಬಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ, ಉಪ ವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ, ದೇಗುಲ ಇಒ ಎಚ್.ಗಂಗಾಧರಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಮಂಜುಳಾ, ಉಪಾಧ್ಯಕ್ಷೆ ಪಿ.ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್‌ಅನ್ವರ್, ಸದಸ್ಯರಾದ ಜೆ.ಆರ್.ರವಿಕುಮಾರ್, ತಿಪ್ಪೇಶ್, ಈರಕ್ಕ, ಸುನೀತಾ, ಸರ್ವಮಂಗಳಾ, ಎಂ.ಟಿ.ಮಂಜುನಾಥ, ವಿನುತಾ, ಮಹಾಂತಣ್ಣ, ಗ್ರಾಮಸ್ಥರಾದ ಜೆ.ಪಿ.ರವಿಶಂಕರ್, ಜಿ.ಎಸ್.ಪ್ರಭುಸ್ವಾಮಿ, ಎಂ.ವೈ.ಟಿ.ಸ್ವಾಮಿ, ಎಸ್.ಉಮಾಪತಿ, ಬಾಲರಾಜ್ ಹಾಜರಿದ್ದರು.
ದಸರಾ ಮಾದರಿ ದೀಪಾಲಂಕಾರ ಜಾತ್ರೆಯ ಸೌಂದರ್ಯ ಮತ್ತು ಭಕ್ತರ ಉತ್ಸಾಹ ಹೆಚ್ಚಿಸಲು ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಮೈಸೂರು ದಸರಾ ಮಾದರಿಯಲ್ಲಿ ದೇವಸ್ಥಾನದ ಮುಖ್ಯ ದ್ವಾರದಿಂದ ರಥ ಬೀದಿವರೆಗೆ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ದೀಪಾಲಂಕಾರ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ದೇಗುಲದ ಅಧಿಕಾರಿಗಳು ಮತ್ತು ಬೆಸ್ಕಾಂ ಅಧಿಕಾರಿಗಳು ಚರ್ಚಿಸಿ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.