ADVERTISEMENT

ಷಾ, ಮೋದಿಯ ಗುಲಾಮ ಯಡಿಯೂರಪ್ಪ: ಎಚ್‌.ಆಂಜನೇಯ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:29 IST
Last Updated 23 ಆಗಸ್ಟ್ 2019, 9:29 IST
ಎಚ್.ಆಂಜನೇಯ
ಎಚ್.ಆಂಜನೇಯ   

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ದೊಡ್ಡ ಹೋರಾಟಗಾರ. ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿದ ಬಳಿಕ ಅವರು ಅಸಹಾಯಕರಾಗಿದ್ದಾರೆ. ಅಮಿತ್‌ ಷಾ ಹಾಗೂ ನರೇಂದ್ರ ಮೋದಿ ಅವರ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಟೀಕಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಬಿಜೆಪಿ ಕೂಡ ಗುಲಾಮಗಿರಿಗೆ ಒಗ್ಗಿಕೊಂಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲು ಹೈಕಮಾಂಡ್‌ ಸೂಚನೆಗೆ ಕಾಯಬೇಕಾಯಿತು. ಸಚಿವ ಸಂಪುಟ ವಿಸ್ತರಣೆಗೆ ತಿಂಗಳು ಹಿಡಿಯಿತು. ಖಾತೆ ಹಂಚಿಕೆಗೆ ಇನ್ನೂ ಎಷ್ಟು ದಿನ ಕಾಯಬೇಕೊ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಜನಾದೇಶ ಸಿಗಲಿಲ್ಲ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಬಿಜೆಪಿ ನಿರಂತರವಾಗಿ ತೊಂದರೆ ನೀಡಿತು. ಆಡಳಿತ ಪಕ್ಷದ ಶಾಸಕರ ರಾಜೀನಾಮೆ ಕೊಡಿಸಿ ಅಧಿಕಾರ ಹಿಡಿಯುವ ಅನೈತಿಕ, ಕೆಟ್ಟ ಸಂಸ್ಕೃತಿಗೆ ಬಿಜೆಪಿ ನಾಂದಿ ಹಾಡಿತು. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಏರಿದ ಬಿಜೆಪಿಗೂ ಜನಬೆಂಬಲವಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಯಡಿಯೂರಪ್ಪ ಸರ್ಕಾರಕ್ಕೆ ಕಾಂಗ್ರೆಸ್‌ ವಿನಾ ಕಾರಣ ತೊಂದರೆ ನೀಡುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೂ ಕೈಹಾಕುವುದಿಲ್ಲ. ಬಿಜೆಪಿಯಲ್ಲಿ ಈಗಾಗಲೇ ಅಪಸ್ವರ ಕೇಳಿಬರುತ್ತಿದೆ. ಅಭದ್ರತೆಯಲ್ಲೇ ಇರುವ ಸರ್ಕಾರ ಅವಧಿಗೂ ಮುನ್ನವೇ ಅಂತ್ಯವಾಗುವುದು ದಿಟ. ಹೀಗೆ, ಮಧ್ಯಂತರದಲ್ಲಿ ಎದುರಾಗುವ ಚುನಾವಣೆಗೆ ಪಕ್ಷ ಸಿದ್ಧವಾಗಿದೆ’ ಎಂದು ಹೇಳಿದರು.

‘ಶಾಸಕರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಕೂಡಲೇ ಚುನಾವಣೆ ನಡೆಸಬೇಕು. ಈ ಎಲ್ಲ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಅನೈತಿಕ ರಾಜಕಾರಣಕ್ಕೆ ನಾಂದಿ ಹಾಡಿದ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ವಾಗ್ದಾಳಿ ನಡೆಸಿದರು.

‘ಅತಿವೃಷ್ಟಿಗೆ ಅರ್ಧ ಕರ್ನಾಟಕ ಮುಳುಗಿದೆ. ಮನೆ ಕಳೆದುಕೊಂಡಿರುವ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ನೋವು ಆಲಿಸಲು ಪ್ರಧಾನಿ ನರೇಂದ್ರ ಮೋದಿ ಈವರೆಗೆ ಕರ್ನಾಟಕಕ್ಕೆ ಬರಲಿಲ್ಲ. 25 ಬಿಜೆಪಿ ಸಂಸದರಿದ್ದರೂ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಸ್ಪಂದಿಸುತ್ತಿಲ್ಲ’ ಎಂದರು.

‘ಚುನಾವಣಾ ಆಯೋಗದ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸಿದೆ. ಬಿಜೆಪಿಯ ಹಿತಾಸಕ್ತಿಗೆ ಅನುಗುಣವಾಗಿ ಆಯೋಗವನ್ನು ನಡೆಸಿಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಸೇರಿ ಹಲವು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪಿ.ಪ್ರಕಾಶ ಮೂರ್ತಿ, ಕೃಷ್ಣಮೂರ್ತಿ, ನರಸಿಂಹರಾಜು, ಕಾಂಗ್ರೆಸ್‌ ಮುಖಂಡರಾದ ಡಿ.ಎನ್‌.ಮೈಲಾರಪ್ಪ, ಬಿ.ಟಿ.ಜಗದೀಶ್‌, ಮಹಡಿ ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.