ADVERTISEMENT

ವಿಜೃಂಭಣೆಯಿಂದ ನಡೆದ ಆಂಜನೇಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 2:34 IST
Last Updated 17 ಫೆಬ್ರುವರಿ 2021, 2:34 IST
ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮದಲ್ಲಿ ಮಂಗಳವಾರ ಆಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮದಲ್ಲಿ ಮಂಗಳವಾರ ಆಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.   

ನೇರಲಗುಂಟೆ (ನಾಯಕನಹಟ್ಟಿ): ನೇರಲಗುಂಟೆ ಆಂಜನೇಯಸ್ವಾಮಿಯ ವಾರ್ಷಿಕ ರಥೋತ್ಸವವು ಮಂಗಳವಾರ ಸಾವಿರಾರು ಜನರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಆಂಜನೇಯಸ್ವಾಮಿ ಜಾತ್ರೆಯು ಮೂರು ದಿನಗಳ ಜಾತ್ರೆಯಾಗಿದ್ದು, ಸೋಮವಾರ ಅಲಂಕಾರಗೊಂಡ ಪಲ್ಲಕ್ಕಿಯಲ್ಲಿ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಹೊರವಲಯದಲ್ಲಿ ಗಂಗಾಪೂಜೆಗೆ ತೆಗೆದುಕೊಂಡು ಹೋಗಲಾಯಿತು. ನಂತರ ಗ್ರಾಮಕ್ಕೆ ಕರೆತರಲಾಯಿತು. ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಚಿಕ್ಕರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿಕೊಂಡು ರಥವನ್ನು ಎಳೆಯಲಾಯಿತು.

ಮಧ್ಯಾಹ್ನ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ದೇವರನ್ನು ಕೂರಿಸಿ ರಥವನ್ನು ಎಳೆಯಲಾಯಿತು. ಮಹಿಳೆಯರು, ಮಕ್ಕಳು ರಥಬೀದಿಗೆ ನೀರುಹಾಕಿ ಭಕ್ತಿ ಸಮರ್ಪಿಸಿದರು. ಭಕ್ತರು ರಥಕ್ಕೆ ಚೂರುಬೆಲ್ಲ, ಮೆಣಸು, ಬಾಳೆಗಳನ್ನು ತೂರಿದರು. ಪಾದಗಟ್ಟೆಗೆ ರಥವನ್ನು ಎಳೆದು ತಂದು ಪೂಜೆ ನೆರವೇರಿಸಿದ ನಂತರ ಮತ್ತೆ ರಥವನ್ನು ದೇವಾಲಯದ ಸ್ವಸ್ಥಾನಕ್ಕೆ ಕರೆತರಲಾಯಿತು.

ADVERTISEMENT

ಇಂದು ಬಣ್ಣಬಣ್ಣದ ಓಕುಳಿ ಹಬ್ಬ: ಎರಡು ದಿನಗಳ ಪೂಜಾ ಕೈಂಕರ್ಯದ ವೇಳೆ ಆಂಜನೇಯಸ್ವಾಮಿಗೆ ದೃಷ್ಟಿಯಾಗಿರುತ್ತದೆ ಎಂದು ಬುಧವಾರ ಬೆಳಿಗ್ಗೆ 9 ಗಂಟೆಗೆ ದೇವಾಲಯದಲ್ಲಿ ದೇವರಿಗೆ ಅರಿಶಿಣ ಕುಂಕುಮದ ಬಣ್ಣದ ಓಕುಳಿ ಸೇವೆಯನ್ನು ನೆರವೇರಿಸಲಾಗುವುದು. ಈ ವೇಳೆ ಗ್ರಾಮದ ಯಜಮಾನರು, ಯುವಕರು, ಮಹಿಳೆಯರು ಮಕ್ಕಳು ಸೇರಿ ಪ್ರತಿಯೊಬ್ಬರೂ ಓಕುಳಿಯ ಬಣ್ಣದ ನೀರನ್ನು ತಮ್ಮ ಮೇಲೆ ಹಾಕಿಸಿಕೊಂಡು ಪುನೀತರಾಗುತ್ತಾರೆ. ನಂತರ ಅಲಂಕಾರಗೊಂಡು ಹೂವಿನ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಗುವುದು. ಈ ವೇಳೆ ಪ್ರತಿಯೊಬ್ಬರೂ ದೇವರಿಗೆ ಹಣ್ಣುಕಾಯಿ ಕೊಟ್ಟು ಹರಕೆ ಪೂರೈಸುವರು. ಸಂಜೆ 4 ಗಂಟೆಗೆ ದೇವರನ್ನು ಗುಡಿದುಂಬಿಸಿ ಜಾತ್ರೆಗೆ ಪರಿಸಮಾಪ್ತಿ ಹೇಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.