ಚಿತ್ರದುರ್ಗ: ತಾಲ್ಲೂಕಿನ ಹುಲ್ಲೇಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ–ಇಂಗ್ಲಿಷ್ ಮಾಧ್ಯಮ ಶಾಲೆ ಶತಮಾನೋತ್ಸವ ಕಂಡಿದೆ. ಮುಖ್ಯಶಿಕ್ಷಕ ಜಿ.ಟಿ.ಹನುಮಂತಪ್ಪ ಅವರ ಶ್ರಮದಿಂದಾಗಿ ಈ ಶಾಲೆ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುತ್ತಿದೆ. ಶಾಲೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ಅವರು ವಿದ್ಯಾರ್ಥಿಗಳ ಸಂಖ್ಯೆಯನ್ನು 135ರಿಂದ 476ಕ್ಕೆ ಏರಿಸಿದ್ದಾರೆ. ಇದರಿಂದಾಗಿ ಈ ಭಾಗದ ನಾಲ್ಕು ಖಾಸಗಿ ಶಾಲೆಗಳು ಬಾಗಿಲು ಮುಚ್ಚಿವೆ.
ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಕನ್ನಡ, ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿರುವ ಈ ಶಾಲೆಗೆ ದಾಖಲಾತಿ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ಪ್ರಯತ್ನಿಸುತ್ತಾರೆ. ನೂರಾರು ವಿದ್ಯಾರ್ಥಿಗಳು ದಾಖಲಾತಿ ಸಿಗದೇ ವಾಪಸ್ ತೆರಳುತ್ತಾರೆ. ಪ್ರತಿ ತರಗತಿಗೆ ದಾಖಲಾತಿಯನ್ನು 60 ವಿದ್ಯಾರ್ಥಿಗಳಿಗೆ ಮಿತಿಗೊಳಿಸಿರುವ ಕಾರಣ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ. ಪ್ರತಿ ವಿದ್ಯಾರ್ಥಿಗೂ ಸಮವಸ್ತ್ರ, ಗುರುತಿನ ಚೀಟಿ, ಉಚಿತ ಬಸ್ ಸೌಲಭ್ಯ ಒದಗಿಸಲಾಗಿದೆ.
ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಸರ್ಕಾರದಿಂದ ಮಧ್ಯಾಹ್ನದ ಬಿಸಿಯೂಟ ಸೌಲಭ್ಯವಿಲ್ಲ. ಆದರೆ ಹನುಮಂತಪ್ಪ ಅವರು ಶಿಕ್ಷಕರ ಸಹಕಾರ ಪಡೆದು ಆ ಮಕ್ಕಳಿಗೂ ಊಟ ಒದಗಿಸುತ್ತಿದ್ದಾರೆ. ಗ್ರಾಮಸ್ಥರ ಸಹಕಾರ ಸದುಪಯೋಗ ಮಾಡಿಕೊಂಡಿರುವ ಮುಖ್ಯಶಿಕ್ಷಕರು ಅತ್ಯಾಧುನಿಕ ರೀತಿಯಲ್ಲಿ ಶಾಲೆ ನಡೆಸುತ್ತಿದ್ದಾರೆ. ಪ್ರತಿ ತಿಂಗಳೂ ಪಾಲಕರ ಸಭೆ, ವಾಟ್ಸ್‌ಆ್ಯಪ್ ಗ್ರೂಪ್ ರಚನೆ, ಹಾಜರಾತಿಯ ಮೇಲೆ ನಿಗಾ ವಹಿಸುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಕಾಯಂ 6 ಮಂದಿ ಶಿಕ್ಷಕರಿದ್ದರೆ, 7 ಅತಿಥಿ ಶಿಕ್ಷಕರ ಸೇವೆ ಪಡೆಯಲಾಗುತ್ತಿದೆ. ದಿನೇ ದಿನೇ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಗ್ರಾಮಸ್ಥರು ಸೇರಿ ಶಾಲಾ ಕಟ್ಟಡದ ಮೇಲೆ ಶೀಟ್ ಹಾಕಿ ಪ್ರತ್ಯೇಕ 4 ಕೊಠಡಿಗಳನ್ನು ನಿರ್ಮಿಸಿದ್ದಾರೆ. ಹನುಮಂತಪ್ಪ ಅವರು ಶಾಲಾ ಆವರಣದಲ್ಲಿ ಕಲಿಕಾ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
56 ವರ್ಷ ವಯಸ್ಸಿನ ಹನುಮಂತಪ್ಪ ಅವರು 39 ಶಿಕ್ಷಕರಾಗಿ ಅನುಭವ ಹೊಂದಿದ್ದಾರೆ. ಹುಲ್ಲೇಹಾಳ ಶಾಲೆಯಲ್ಲಿ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಣಿವರಿಯದ ಅವರ ಸೇವೆಗೆ ಹಲವು ಪ್ರಶಸ್ತಿ ಬಂದಿವೆ, ಹಲವು ಸಂಘಟನೆಗಳು ಗೌರವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.