
ಮೊಳಕಾಲ್ಮುರು: ಸತತ ಕಠಿಣ ಪರಿಶ್ರಮ ಪಡುವ ಮೂಲಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೇವಸಮುದ್ರದಲ್ಲಿ ಮಂಗಳವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಹಲವು ಕಾರ್ಯಕ್ರಮ ಹಾಕಿಕೊಂಡು ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. ಶಿಕ್ಷಕರು ಸಮರ್ಪಕವಾಗಿ ಈ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ಮೂಲಕ ನೆರವಿಗೆ ಬರಬೇಕು. ವಿದ್ಯಾರ್ಥಿಗಳ ಇರಬಹುದಾದ ಪರೀಕ್ಷೆ ಭಯ ಹೋಗಲಾಡಿಸಲು ಮೊದಲು ಕ್ರಮ ಕೈಗೊಳ್ಳಬೇಕು’ ಎಂದರು.
‘ತಾಲ್ಲೂಕು ಆರ್ಥಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು, ಉತ್ತಮ ಶಿಕ್ಷಣ ಪಡೆಯುವ ಮೂಲಕ ಮಾತ್ರ ಭದ್ರ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಪಾಲಕರು, ವಿದ್ಯಾರ್ಥಿಗಳು ಇದನ್ನು ಮನಗಂಡು ಶ್ರಮವಹಿಸಿ ಉತ್ತಮ ಶಿಕ್ಷಣ ಹೊಂದಲು ಮುಂದಾಗಬೇಕು’ ಎಂದು ಹೇಳಿದರು.
ದೇವಸಮುದ್ರ ಹೋಬಳಿ ವ್ಯಾಪ್ತಿಯ 17 ಪ್ರೌಢಶಾಲೆಗಳಿಂದ 600ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯ್ದ 12 ವಿಷಯ ತಜ್ಞರು ಸಂವಾದ ನಡೆಸಿಕೊಟ್ಟರು.
ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಮತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ, ಬಿಆರ್‌ಸಿ ಕೆ. ತಿಪ್ಪೇಸ್ವಾಮಿ, ಬಿಸಿಯೂಟ ಯೋಜನಾಧಿಕಾರಿ ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಚಂದ್ರಣ್ಣ, ಉಪಾಧ್ಯಕ್ಷ ಜಿ.ಆರ್. ಕುಮಾರಸ್ವಾಮಿ ಮತ್ತು ಸದಸ್ಯರು, ಇಸಿಒ ಲೋಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.