ADVERTISEMENT

ಎಚ್.ಡಿ. ಪುರದಲ್ಲಿ ಗುಂಡಿನ ಸೇವೆ ಉತ್ಸವಕ್ಕೆ ಭರದ ಸಿದ್ಧತೆ

5 ಲಕ್ಷ ಭಕ್ತರಿಗೆ ಊಟದ ವ್ಯವಸ್ಥೆ, 350 ಬಾಣಸಿಗರಿಂದ ಅಡುಗೆ ತಯಾರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:32 IST
Last Updated 6 ಫೆಬ್ರುವರಿ 2023, 5:32 IST
ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ನಡೆಯುವ ಗುಂಡಿನ ಸೇವೆ ಹಾಗೂ ಅನ್ನದ ಕೋಟೆ ಉತ್ಸವಕ್ಕೆ ಬರುವ ಭಕ್ತರಿಗೆ ಊಟ ಸಿದ್ಧಪಡಿಸುತ್ತಿರುವ ಬಾಣಸಿಗರು.
ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ನಡೆಯುವ ಗುಂಡಿನ ಸೇವೆ ಹಾಗೂ ಅನ್ನದ ಕೋಟೆ ಉತ್ಸವಕ್ಕೆ ಬರುವ ಭಕ್ತರಿಗೆ ಊಟ ಸಿದ್ಧಪಡಿಸುತ್ತಿರುವ ಬಾಣಸಿಗರು.   

ಹೊಳಲ್ಕೆರೆ: ತಾಲ್ಲೂಕಿನ ಹೊರಕೆರೆ ದೇವರಪುರದಲ್ಲಿ ಫೆ.6 ಮತ್ತು 7ರಂದು ನಡೆಯುವ ಗುಂಡಿನ ಸೇವೆ ಹಾಗೂ ಅನ್ನದ ಕೋಟೆ ಉತ್ಸವಕ್ಕೆ ಭರದ ತಯಾರಿ ನಡೆದಿದೆ.

‘ಉತ್ಸವಕ್ಕೆ ಬರುವ ಸುಮಾರು 5 ಲಕ್ಷ ಭಕ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 350 ಬಾಣಸಿಗರು ಅಡುಗೆ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಊಟಕ್ಕೆ 600 ಕ್ವಿಂಟಲ್ ಲಾಡು ತಯಾರಿಸುತ್ತಿದ್ದು, ಸುಮಾರು 300 ಕ್ವಿಂಟಲ್ ಅಕ್ಕಿ, 50 ಕ್ವಿಂಟಲ್ ಬೇಳೆ ಹಾಗೂ ಬೆಂಗಳೂರಿನಿಂದ ಲಾರಿಗಳಲ್ಲಿ ತರಕಾರಿ ತರಿಸಲಾಗಿದೆ. ಉಪ್ಪಿಟ್ಟಿಗೆ 15 ಕ್ವಿಂಟಲ್ ರವೆ ತರಿಸಲಾಗಿದ್ದು, 8 ಕ್ವಿಂಟಲ್ ಅಕ್ಕಿಯಿಂದ ಪುಳಿಯೋಗರೆ ತಯಾರಿಸಲಾಗುವುದು. ಫೆ.6ರ ಸಂಜೆ 4ರಿಂದ ಊಟ ಆರಂಭವಾಗಲಿದ್ದು, ಬಫೆ ಮಾದರಿಯಲ್ಲಿ ಊಟ ವಿತರಿಸಲಾಗುವುದು. ಒಮ್ಮೆಗೆ 20 ಕ್ವಿಂಟಲ್ ನಂತೆ ಅನ್ನ ತಯಾರಿಸಲು ಸೂಚಿಸಿದ್ದು, ಎಷ್ಟೇ ಭಕ್ತರು ಬಂದರೂ ಊಟ ನೀಡುತ್ತೇವೆ’ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಡಿ. ರಂಗಯ್ಯ ತಿಳಿಸಿದ್ದಾರೆ.

‘ಉತ್ಸವದಲ್ಲಿ ಆಚರಣೆಗಳು ಮಾತ್ರ ನಡೆಯಲಿದ್ದು, ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಅನ್ನದ ಕೋಟೆ ಉತ್ಸವಕ್ಕೆ ಮಂಟಪ ನಿರ್ಮಿಸಲಾಗಿದೆ. 14 ಅಡಿ ಸುತ್ತಳತೆ ಹಾಗೂ 2.5 ಅಡಿ ಎತ್ತರದ ಸ್ಟೀಲ್ ಬಾಕ್ಸ್ ನಿರ್ಮಿಸಿದ್ದು, ಇದರಲ್ಲಿ 35 ಕ್ವಿಂಟಲ್ ಅನ್ನ, ಕಲ್ಲು ಸಕ್ಕರೆ. ದ್ರಾಕ್ಷಿ, ಗೋಡಂಬಿ ಸೇರಿದಂತೆ ಪಂಚಾಮೃತಕ್ಕೆ ಬಳಸುವ ಪದಾರ್ಥಗಳನ್ನು ಬಳಸಿ ಅನ್ನದ ಕೋಟೆ ನಿರ್ಮಿಸಲಾಗುವುದು. ಪೂಜೆ ನಡೆದ ನಂತರ ಪ್ರಸಾದವನ್ನು ಭಕ್ತರಿಗೆ ಹಂಚಲಾಗುವುದು’ ಎಂದು ಸಮಿತಿಯವರು ತಿಳಿಸಿದ್ದಾರೆ.

ADVERTISEMENT

ಉತ್ಸವಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ 85 ದೇವರುಗಳಿಗೆ ಆಹ್ವಾನ ನೀಡಲಾಗಿದೆ. ದೇವರನ್ನು ಕರೆದುಕೊಂಡು ಬರುವವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ದೇವರುಗಳನ್ನು ಕೂರಿಸಲು 300 ಅಡಿ ಉದ್ದ, 80 ಅಡಿ ಅಗಲದ ಪೆಂಡಾಲ್ ನಿರ್ಮಿಸಲಾಗಿದೆ. ಗುಂಡಿನ ಸೇವೆ ನಡೆಯುವ ಕರೇಕಲ್ ಬೆಟ್ಟದಲ್ಲಿ ಎಲ್ಲಾ ಸಿದ್ಧತೆ ನಡೆಸಲಾಗಿದೆ. ಬೆಟ್ಟದ ಮೇಲಿನ ದೇವಸ್ಥಾನದ ಪಕ್ಕದಲ್ಲಿ 2 ಎಕರೆ ಜಾಗವನ್ನು ಸ್ವಚ್ಛಗೊಳಿಸಿದ್ದು, ವಾಹನ ನಿಲುಗಡೆ ಹಾಗೂ ಭಕ್ತರಿಗೆ ಮೀಸಲಿಡಲಾಗಿದೆ.

ಉತ್ಸವದ ಅಂಗವಾಗಿ ಇಡೀ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಈಗಾಗಲೇ ಹೊರಗಿನ ಭಕ್ತರು ಆಗಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.