
ಸಿರಿಗೆರೆ: ಸಾರ್ವಜನಿಕರು ಇನ್ನುಮುಂದೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳನ್ನು ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಬಿ.ವಿ.ಗಿರೀಶ್ ತಿಳಿಸಿದರು.
ಸಿರಿಗೆರೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಜನಾರೋಗ್ಯ ಯೋಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳನ್ನು ಸಾರ್ವಜನಿಕರು ಪಡೆದುಕೊಳ್ಳುವ ಸೌಲಭ್ಯವನ್ನು ಈಗ ಸರಳೀಕರಿಸಲಾಗಿದೆ. ಮೊಬೈಲ್‌ನಲ್ಲೇ ನೋಂದಣಿ ಮಾಡಿ ಕಾರ್ಡ್ ಕಾಪಾಡಿಟ್ಟುಕೊಳ್ಳಬಹುದು’ ಎಂದರು.
‘ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 1,650 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ. ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ ₹ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ ₹ 1.5 ಲಕ್ಷದವರೆಗಿನ ಚಿಕಿತ್ಸೆಯನ್ನು ಸುಸಜ್ಜಿತ ಸರ್ಕಾರಿ ಅಥವಾ ರಾಜ್ಯದಾದ್ಯಂತ ನೋಂದಾಯಿತ 3,200 ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬಹುದು. ಕಾರ್ಡ್‌ಗಳನ್ನು ಪಡೆಯಲು ಬಿಪಿಎಲ್, ಎಪಿಎಲ್ ಮತ್ತು ಆಧಾರ್ ಕಾರ್ಡ್ ಜೊತೆಯಲ್ಲಿಟ್ಟುಕೊಂಡು ನೋಂದಣಿ ಮಾಡಿಸಬಹುದು’ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಅವರು ಮೊಬೈಲ್ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯ ಕಾರ್ಡ್ ಪಡೆಯುವ ಬಗ್ಗೆ ವಿವರಿಸಿದರು. ‘ಆರೋಗ್ಯ ಕಾರ್ಡ್ ಪಡೆಯಲು ಆಧಾರ್ ನಂಬರ್ ಲಿಂಕ್ ಆಗಿರುವ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್‌ಗಳ ಅಗತ್ಯ ಇದೆ. ತಾಂತ್ರಿಕವಾಗಿ ಯಾವುದೇ ತೊಂದರೆ ಕಂಡು ಬಂದರೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು’ ಎಂದರು.
ಗ್ರಾಮ ಪಂಚಾಯಿತಿ ಪಿಡಿಒ ಅನ್ಸಿರಾಬಾನು, ‘ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಗಳಲ್ಲಿ ಸಾರ್ವಜನಿಕರಿಗೆ ಈ ಮಾಹಿತಿಯನ್ನು ನೀಡಲಾಗುವುದು’ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸಮುದಾಯ ಆರೋಗ್ಯ ವೈದ್ಯಾಧಿಕಾರಿ ರಮ್ಯಾ, ಫಾರ್ಮಸಿ ಅಧಿಕಾರಿ ಮೋಹನ್, ಗ್ರಾಮ ಒನ್ ಸಹಾಯಕ ಸತೀಶ್, ಆಶಾ ಕಾರ್ಯಕರ್ತೆ ವನಜಾಕ್ಷಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.