ADVERTISEMENT

ಹಳ್ಳಿಯಲ್ಲೇ ಸಿಗಲಿದೆ ‘ಆಯುಷ್ಮಾನ್‌’ ಕಾರ್ಡ್‌

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 13:21 IST
Last Updated 20 ಡಿಸೆಂಬರ್ 2019, 13:21 IST
ಪಂಕಜ್‌ ಕುಮಾರ್‌ ಪಾಂಡೆ
ಪಂಕಜ್‌ ಕುಮಾರ್‌ ಪಾಂಡೆ   

ಚಿತ್ರದುರ್ಗ: ‘ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ’ದ ಕಾರ್ಡ್‌ಗಳನ್ನು ಪಡೆಯಲು ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗೆ ಅಲೆಯುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಬಾಪೂಜಿ ಸೇವಾ ಕೇಂದ್ರ’ದಲ್ಲಿ ಕಾರ್ಡ್‌ ವಿತರಿಸುವ ಅಭಿಯಾನ ಆರಂಭವಾಗಲಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಆಸ್ಪತ್ರೆ, ಕರ್ನಾಟಕ ಒನ್‌ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಕಾರ್ಡ್‌ ಸಿಗುತ್ತಿದೆ. ಈವರೆಗೆ 91 ಲಕ್ಷ ಜನರಿಗೆ ಕಾರ್ಡ್‌ ವಿತರಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಡ್ ಹಂಚಿಕೆ ಆರಂಭಿಸಿದ ಬಳಿಕ ಹೆಚ್ಚು ಜನರನ್ನು ತಲುಪಲು ಸಾಧ್ಯವಿದೆದೆ’ ಎಂದು ಹೇಳಿದರು.

‘ರಾಜ್ಯದ 6.85 ಕೋಟಿ ಜನಸಂಖ್ಯೆಯಲ್ಲಿ 4.3 ಕೋಟಿ ಜನರು ಬಿಪಿಎಲ್‌ ಕಾರ್ಡ್‌ ವ್ಯಾಪ್ತಿಯಲ್ಲಿದ್ದಾರೆ. ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಕ್ಕೆ ಉಚಿತ ಚಿಕಿತ್ಸೆ ಇದೆ. ಬಿಪಿಎಲ್‌ ವ್ಯಾಪ್ತಿಯಲ್ಲಿರುವ ಕುಟುಂಬಕ್ಕೆ ಚಿಕಿತ್ಸೆಯಲ್ಲಿ ಶೇ 30ರಷ್ಟು ರಿಯಾಯಿತಿ ಇದೆ’ ಎಂದು ವಿವರಿಸಿದರು.

ADVERTISEMENT

‘ಆಯುಷ್ಮಾನ್‌ ಯೋಜನೆಯಡಿ 430 ಆಸ್ಪತ್ರೆಗಳು ಸೇವೆ ಒದಗಿಸುತ್ತಿವೆ. ಪ್ರತಿ ಆಸ್ಪತ್ರೆಯಲ್ಲಿ ಸರ್ಕಾರ ‘ಆರೋಗ್ಯ ಮಿತ್ರ’ ಸಿಬ್ಬಂದಿ ನೇಮಕ ಮಾಡಿದೆ. ಉನ್ನತ ಚಿಕಿತ್ಸೆಗೆ ತೆರಳುವ ರೋಗಿಗಳು ಖಾಸಗಿ ಆಸ್ಪತ್ರೆಯ ‘ಆರೊಗ್ಯ ಮಿತ್ರ’ ಸಿಬ್ಬಂದಿಯ ನೆರವು ಪಡೆಯಬಹುದು. ಚಿಕಿತ್ಸೆಯಲ್ಲಿ ವಿಳಂಬ ಉಂಟಾದರೆ ಅಥವಾ ಸಮಸ್ಯೆ ಎದುರಾದರೆ ದೂರು ನೀಡಬಹುದು’ ಎಂದು ಹೇಳಿದರು.

‘ರಾಜ್ಯದ ಆಸ್ಪತ್ರೆಗಳಲ್ಲಿ 55 ಸಾವಿರ ವೈದ್ಯಕೀಯ ಉಪಕರಣಗಳಿವೆ. ಇವುಗಳ ನಿರ್ವಹಣೆಗೆ ಹೊಸ ವಿಧಾನ ಜಾರಿಗೆ ತರಲಾಗುತ್ತಿದೆ. ಉಪಕರಣಗಳ ದುರಸ್ತಿಗೆ ಕಾಲಮಿತಿ ನಿಗದಿಪಡಿಸಲಾಗುತ್ತಿದೆ. ವಿದ್ಯುತ್‌ ಹಾಗೂ ಕಟ್ಟಡ ನಿರ್ವಹಣೆಗೆ ಇಬ್ಬರು ಎಂಜಿನಿಯರುಗಳನ್ನು ನಿಯೋಜಿಸಲಾಗುತ್ತಿದೆ. ಆರ್ಥಿಕ ಇಲಾಖೆಯ ಅನುಮತಿಗೆ ಕಾಯುತ್ತಿದ್ದೇವೆ’ ಎಂದು ವಿವರಿಸಿದರು.

ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಜನಜಂಗುಳಿ ನಿಯಂತ್ರಣ, ಖಾಸಗಿ ವಾಹನ ಪ್ರವೇಶ ನಿರ್ಬಂಧಕ್ಕೆ ಸೂಚನೆ ನೀಡಿದರು. ಸ್ವಚ್ಛತೆಗೆ ಕಾಪಾಡಲು ಆದ್ಯತೆ ನೀಡುವಂತೆ ತಾಕೀತು ಮಾಡಿದರು. ನಿಯಮಿತವಾಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.

ಕೃತಕ ಉಸಿರಾಟದ ಉಪಕರಣಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳದೇ ಇರುವುದಕ್ಕೆ ಅಧಿಕಾರಿಯನ್ನು ಪ್ರಶ್ನಿಸಿದರು. ಉಪಕರಣದ ಬಳಕೆಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ತರಬೇತಿ ನೀಡುವಂತೆ ಸಲಹೆ ನೀಡಿದರು. ಗುಟುಕ ತಿನ್ನುವ ‘ಡಿ’ ಗ್ರೂಪ್‌ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಆದೇಶಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಡಾರ್ಮೆಟರಿ:ರೋಗಿಗಳೊಂದಿಗೆ ಬರುವ ಸಂಬಂಧಿಕರ ವಿಶ್ರಾಂತಿ ಹಾಗೂ ವಾಸ್ತವ್ಯಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಡಾರ್ಮೆಟರಿ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿರುವ ಬೆಡ್‌ಗಳ ಸಂಖ್ಯೆಗೆ ಅನುಗುಣವಾಗಿ ಡಾರ್ಮೆಟರಿ ನಿರ್ಮಾಣ ಮಾಡಲಾಗುತ್ತದೆ. ₹ 40 ಕೋಟಿ ಅಂದಾಜು ವೆಚ್ಚದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್‌) ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ರೋಗಿ ಜೊತೆಗೆ ಬರುವ ಒಬ್ಬರಿಗೆ ಮಾತ್ರ ಉಚಿತ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಯೋಜನೆ ಪರಿಶೀಲಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.