ADVERTISEMENT

ಹಿರಿಯೂರು | ಸತತ ಮಳೆ: ಭರ್ತಿಯಾದ ಬ್ಯಾರೇಜ್‌

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:33 IST
Last Updated 20 ಮೇ 2022, 4:33 IST
ಹಿರಿಯೂರು ತಾಲ್ಲೂಕಿನ ಕಾತ್ರಿಕೇನಹಳ್ಳಿಯ ಬ್ಯಾರೇಜ್ ಬುಧವಾರ ರಾತ್ರಿ ಬಿದ್ದ ಮಳೆಗೆ ಕೋಡಿ ಹರಿಯುತ್ತಿರುವುದು.
ಹಿರಿಯೂರು ತಾಲ್ಲೂಕಿನ ಕಾತ್ರಿಕೇನಹಳ್ಳಿಯ ಬ್ಯಾರೇಜ್ ಬುಧವಾರ ರಾತ್ರಿ ಬಿದ್ದ ಮಳೆಗೆ ಕೋಡಿ ಹರಿಯುತ್ತಿರುವುದು.   

ಹಿರಿಯೂರು:ತಾಲ್ಲೂಕಿನಲ್ಲಿ ಹರಿಯುವ ವೇದಾವತಿ ಮತ್ತು ಸುವರ್ಣಮುಖಿ ನದಿ ಪಾತ್ರಗಳಲ್ಲಿ ನಿರ್ಮಿಸಿರುವ ಬಹುತೇಕ ಬ್ಯಾರೇಜುಗಳು, ಹಳ್ಳಗಳಿಗೆ ನಿರ್ಮಿಸಿರುವ ಚೆಕ್‌ಡ್ಯಾಂಗಳು ಮಂಗಳವಾರ ಮತ್ತು ಬುಧವಾರ ಸುರಿದ ಮಳೆಗೆ ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ವಾಣಿವಿಲಾಸ ಜಲಾಶಯದ ಅಣೆಕಟ್ಟೆ ಕೆಳಭಾಗದಲ್ಲಿರುವ ಕಾತ್ರಿಕೇನಹಳ್ಳಿ, ಕುಲುಕಲಗುಂಡಿ, ಲಕ್ಕವ್ವನಹಳ್ಳಿ ಬ್ಯಾರೇಜುಗಳು ಬುಧವಾರ ರಾತ್ರಿಯ ಮಳೆಗೆ ಭರ್ತಿಯಾಗಿದ್ದು, ವೇದಾವತಿ ನದಿಯಲ್ಲಿ ಸಣ್ಣಪ್ರಮಾಣದಲ್ಲಿ ನೀರಿನ ಹರಿವಿತ್ತು. ಸುವರ್ಣಮುಖಿ ನದಿ ಪಾತ್ರದ ಮ್ಯಾದನಹೊಳೆ, ಕೂಡ್ಲಹಳ್ಳಿ, ಹೂವಿನಹೊಳೆ, ತೊರೆ ಓಬೇನಹಳ್ಳಿ, ಶಿಡ್ಲಯ್ಯನಕೋಟೆ, ಹೊಸಹಳ್ಳಿ ಬ್ಯಾರೇಜುಗಳು ಮೇ ತಿಂಗಳಲ್ಲಿ ಬಿದ್ದ ಮಳೆಗೆ ಪ್ರಥಮ ಬಾರಿಗೆ ಭರ್ತಿಯಾಗಿವೆ. ಜವನಗೊಂಡನಹಳ್ಳಿ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿನ ಕೃಷಿಹೊಂಡಗಳು, ಚೆಕ್‌ಡ್ಯಾಂಗಳು ಭರ್ತಿಯಾಗಿದ್ದು, ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಹರಿದುಬಂದಿದೆ.

‘ಮೇ ತಿಂಗಳಲ್ಲಿ ಇಷ್ಟೊಂದು ಮಳೆ ಆಗಿದ್ದನ್ನು ಕಂಡಿರಲಿಲ್ಲ. ಕಡು ಬೇಸಿಗೆ ಬಿಸಿಲಿಗೆ ತೋಟದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದೆವು. ತೋಟದ ಅಂಚಿನಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂ ಬುಧವಾರ ರಾತ್ರಿಯಿಂದ ತುಂಬಿ ಹರಿಯುತ್ತಿದೆ. ಮುಂದಿನ ಒಂದೂವರೆ ತಿಂಗಳು ನೀರಿನ ಯೋಚನೆ ಇಲ್ಲ. ಗಾಯತ್ರಿ ಜಲಾಶಯಕ್ಕೆ ಒಂದೂವರೆ ಅಡಿ ನೀರು ಮೇ ತಿಂಗಳಲ್ಲಿ ಬಂದಿರುವುದು ಇದೇ ಮೊದಲು’ ಎನ್ನುತ್ತಾರೆ ಜಲಾಶಯಕ್ಕೆ ಕೂಗಳತೆ ದೂರದಲ್ಲಿರುವ ಕರಿಯಾಲ ಗ್ರಾಮದ ರಾಮಣ್ಣ.

ADVERTISEMENT

ಜಲಾಶಯಕ್ಕೆ ನೀರು
ತಾಲ್ಲೂಕಿನ ಗಾಯತ್ರಿ ಜಲಾಶಯಕ್ಕೆ ಬುಧವಾರ ರಾತ್ರಿ ಸುರಿದ ಮಳೆಗೆ ಒಂದೂವರೆ ಅಡಿ ನೀರು ಬಂದಿದ್ದು, ಒಳಹರಿವು 865 ಕ್ಯುಸೆಕ್‌ ಇದ್ದರೆ, ವಾಣಿವಿಲಾಸ ಜಲಾಶಯಕ್ಕೆ ಗುರುವಾರ ಬೆಳಿಗ್ಗೆ ಒಳಹರಿವು 1136 ಕ್ಯುಸೆಕ್‌ ಇದ್ದು, ಜಲಾಶಯದ ನೀರಿನ ಮಟ್ಟ 120.10 ಅಡಿಗೆ ತಲುಪಿತ್ತು. (ಪೂರ್ಣಮಟ್ಟ 130 ಅಡಿ).

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.