ADVERTISEMENT

ಹಿರೇಕೆರೆ ಕಾವಲು ಚೌಡೇಶ್ವರಿದೇವಿ ಜಾತ್ರೆ ಸಂಭ್ರಮ

ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಆಚರಣೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 5:48 IST
Last Updated 28 ಜನವರಿ 2026, 5:48 IST
ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲಿನಲ್ಲಿ ಮಂಗಳವಾರ ಕಾವಲು ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನಡೆಯುತು.
ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲಿನಲ್ಲಿ ಮಂಗಳವಾರ ಕಾವಲು ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನಡೆಯುತು.   

ನಾಯಕನಹಟ್ಟಿ: ಹೋಬಳಿಯ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೇವತೆ ಹಿರೇಕೆರೆ ಕಾವಲುಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅನಾವರಣಗೊಂಡವು. ಎತ್ತಿನಹಟ್ಟಿ ಗೌಡರ ಮನೆಯಿಂದ ಬಲಿ ಅನ್ನ ತರಲಾಯಿತು. ಕಡಬನಕಟ್ಟೆ ಗೊಲ್ಲರಹಟ್ಟಿ, ಜೋಗಿಹಟ್ಟಿಯಿಂದ ಕಾಸು ಮೀಸಲು, ಮೊಸರು ಕುಂಭ, ಜಿನಿಗೆ ಹಾಲು ತಂದು ದೇವರಿಗೆ ಮತ್ತು ರಥದ ನಾಲ್ಕು ಚಕ್ರಗಳಿಗೆ ಎಡೆ ಹಾಕಿದರು. ಕಹಳೆ, ಉರುಮೆಗಳು ಸೇರಿ ಹಲವು ಜಾನಪದ ಆಚರಣೆಗಳು ಕಂಡು ಬಂದವು.

ರಥೋತ್ಸವಕ್ಕೂ ಮೊದಲು ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಎತ್ತಿನಹಟ್ಟಿ ಗ್ರಾಮದ ಎಸ್.ಟಿ.ತಿಪ್ಪೇಸ್ವಾಮಿ ₹ 90,000ಕ್ಕೆ ಹರಾಜಿನಲ್ಲಿ ತೆಗೆದುಕೊಂಡರು. ನಂತರ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಹಲವು ಬಣ್ಣಗಳ ಬಾವುಟಗಳಿಂದ ಸುಂದರವಾಗಿ ಅಲಂಕೃತಗೊಂಡ ರಥವನ್ನು ದೇವಾಲಯದ ಎದುರು ಇರುವ ಪಾದಗಟ್ಟೆಯ ಬಳಿಗೆ ನೆರೆದ ಸಾವಿರಾರು ಭಕ್ತರು ಎಳೆದು ತಂದು ಪೂಜೆ ಮಾಡಿ, ಪುನಃ ದೇವಾಲಯದ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ದೇವರನ್ನು ಗುಡಿದುಂಬಿಸಲಾಯಿತು.

ADVERTISEMENT

ಭಕ್ತರು ರಥಕ್ಕೆ ಕಾಳುಮೆಣಸು, ಚೂರುಬೆಲ್ಲ, ಮಂಡಕ್ಕಿ ಸೇರಿದಂತೆ ದವಸ ದಾನ್ಯಗಳನ್ನು ಎರಚಿ ಭಕ್ತಿಯನ್ನು ಅರ್ಪಿಸಿದರು. ರಥೋತ್ಸವಕ್ಕೆ ಜಾನಪದ ಕಲಾವಾದ್ಯಗಳು ಮೆರಗು ನೀಡಿದ್ದವು.

ಇದೇವೇಳೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿ ಗೌಡ್ರು), ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ, ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ, ಜೆ.ಪಿ.ರವಿಶಂಕರ್, ಜಿ.ಟಿ.ದೇವರಾಜ್, ಪ.ಪಂ. ಸದಸ್ಯರಾದ ಟಿ.ಮಹೇಶ್ವರಿ, ಸುನೀತಾ, ಎಂ.ಟಿ.ಮಂಜುನಾಥ್, ಪಿ.ಓಬಯ್ಯ ಮುಖಂಡರಾದ ಪಿ.ಯು.ಸುನೀಲ್‌ಕುಮಾರ್, ಚಿನ್ನಯ್ಯ, ಕಾಕಸೂರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.