ADVERTISEMENT

ಧನ–ಧಾನ್ಯ ಕೃಷಿ ಯೋಜನೆಗೆ ಚಿತ್ರದುರ್ಗ ಆಯ್ಕೆ

ದೇಶದ 100 ಜಿಲ್ಲೆಗಳು ಈ ಯೋಜನೆಗೆ ಆಯ್ಕೆ; ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:29 IST
Last Updated 12 ಅಕ್ಟೋಬರ್ 2025, 6:29 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಸಮೀಪ ಇರುವ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಧಾನ ಮಂತ್ರಿ ಧನ–ಧಾನ್ಯ ಕೃಷಿ ಯೋಜನೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿ ಮಾತನಾಡಿದರು 
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಸಮೀಪ ಇರುವ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಧಾನ ಮಂತ್ರಿ ಧನ–ಧಾನ್ಯ ಕೃಷಿ ಯೋಜನೆಗೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿ ಮಾತನಾಡಿದರು    

ಹಿರಿಯೂರು: ‘ಪ್ರಧಾನಮಂತ್ರಿ ಧನ– ಧಾನ್ಯ ಕೃಷಿ ಯೋಜನೆಗೆ ಆಯ್ಕೆಯಾಗಿರುವ ದೇಶದ 100 ಜಿಲ್ಲೆಗಳಲ್ಲಿ ಚಿತ್ರದುರ್ಗವೂ ಒಂದು ಎಂಬುದು ಸಂತಸದ ಸಂಗತಿ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ತಾಲ್ಲೂಕಿನ ಬಬ್ಬೂರು ಫಾರಂ ಸಮೀಪ ಇರುವ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಧಾನ ಮಂತ್ರಿ ಧನ–ಧಾನ್ಯ ಕೃಷಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಸಣ್ಣ ರೈತರಿದ್ದಾರೆ. ಕೃಷಿ ಆಧಾರಿತ ಜನಸಂಖ್ಯೆಯ ಶೇ 86ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರು ಇದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ, ಸ್ವಾವಲಂಬನೆಗೊಳಿಸುವ ಪ್ರಮುಖ ಉದ್ದೇಶ ಧನ– ಧಾನ್ಯ ಯೋಜನೆಯದ್ದು’ ಎಂದು ತಿಳಿಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ಕೃಷಿ ವಿಜ್ಞಾನ ಪರಿಷತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಗಳಿಗೆ ಅಧಿಕೃತ ಚಾಲನೆ ನೀಡಿದ್ದಾರೆ. ಈ ಯೋಜನೆಗಳ ಮೂಲಕ ಜಿಲ್ಲೆಯ ರೈತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. 70 ಲಕ್ಷ ರೈತರಿಗೆ ಸಹಾಯ ಮಾಡುವ ವಿಶಿಷ್ಟ ಯೋಜನೆ ಇದಾಗಿದೆ. ಆರು ವರ್ಷದ ಈ ಯೋಜನೆಗೆ ಪ್ರತಿ ವರ್ಷ ₹ 24,000 ಕೋಟಿಯಂತೆ ಒಟ್ಟಾರೆ 1.44 ಲಕ್ಷ ಕೋಟಿ ಮೀಸಲಿಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಈ ಯೋಜನೆಯ ಪ್ರಗತಿಯನ್ನು ಎರಡನೇ ವರ್ಷದ ಹೊತ್ತಿಗೆ ಕಾಣಬಹುದು. ದೇಶದ ವಿವಿಧ ರಾಜ್ಯಗಳಲ್ಲಿ ರೈತರ ವಿವಿಧ ಸಮಸ್ಯೆಗಳಿವೆ. ಮಾರುಕಟ್ಟೆ ವ್ಯವಸ್ಥೆ, ಬೆಳೆ ಸಂಗ್ರಹ ವ್ಯವಸ್ಥೆಯಂತಹ ಸಮಸ್ಯೆಗಳಿವೆ. ಈ ಯೋಜನೆ ಜಾರಿಯಿಂದ ಸಾವಯವ ನೈಸರ್ಗಿಕ ಕೃಷಿ ಉಪಕರಣ ನೀಡುವುದು, ಸೂಕ್ಷ್ಮ ನೀರಾವರಿ ವ್ಯವಸ್ಥೆ ಕಲ್ಪಿಸುವುದು, ನಿಯಮಿತ ಮಣ್ಣಿನ ಪರೀಕ್ಷೆಗೆ ಉತ್ತೇಜನ, ಬೆಳೆ ಸಂಗ್ರಹ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಕಾರಜೋಳ ತಿಳಿಸಿದರು.

‘ಯೋಜನೆಯ ಮೂಲ ಉದ್ದೇಶ ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ. ಇದರಿಂದ ಬೆಳೆ ಉತ್ಪಾದನೆ ಶೇ 20ರಷ್ಟು ಹೆಚ್ಚಾಗಲಿದೆ. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ 1.45 ಲಕ್ಷ ರೈತರಿಗೆ ₹ 710 ಕೋಟಿ, ಫಸಲ್ ಬಿಮಾ ಯೋಜನೆಯಡಿ 3.43 ಲಕ್ಷ ರೈತರಿಗೆ ₹ 722 ಕೋಟಿ (ರೈತರ ವಿಮಾ ಕಂತು ₹ 113 ಕೋಟಿ) ಪಾವತಿಯಾಗಿದೆ’ ಎಂದು ವಿವರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಕೆ. ಅಭಿನಂದನ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ, ವಿ. ವಿಶ್ವನಾಥ್, ಕಂದಿಕೆರೆ ಜಗದೀಶ್, ಮಸ್ಕಲ್ ಮಟ್ಟಿ ಹನುಮಂತರಾಯಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಕಾಲೇಜಿನ ಡೀನ್, ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.