ADVERTISEMENT

ಹಿರಿಯೂರು | ಅತಿ ಹೆಚ್ಚು ಅಂತರ್ಜಲ ಬಳಸುವ ದೇಶ ಭಾರತ: ಪ್ರವೀಣ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 13:26 IST
Last Updated 31 ಜನವರಿ 2025, 13:26 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರ್ಜಲ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಪ್ರವೀಣ್ ಉದ್ಘಾಟಿಸಿದರು
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತರ್ಜಲ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಪ್ರವೀಣ್ ಉದ್ಘಾಟಿಸಿದರು    

ಹಿರಿಯೂರು: ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಲ ಬಳಸುವ ದೇಶ ಭಾರತ. ಸುಸ್ಥಿರ ಅಂತರ್ಜಲ ನಿರ್ವಹಣೆ ಮಾಡದೇ ಹೋದಲ್ಲಿ ಭವಿಷ್ಯದಲ್ಲಿ ನೀರಿನ ವಿಚಾರದಲ್ಲಿ ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ಬೆಂಗಳೂರಿನ ಕೇಂದ್ರ ಕಚೇರಿಯ ಅಟಲ್ ಭೂ ಯೋಜನೆಯ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಎಚ್ಚರಿಸಿದರು.

ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗುರುವಾರ ಅಟಲ್ ಭೂಜಲ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡಿದ್ದ ಅಂತರ್ಜಲ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚೀನಾ ಮತ್ತು ಅಮೆರಿಕ ಒಟ್ಟಾಗಿ ಬಳಸುವಷ್ಟು ಅಂತರ್ಜಲವನ್ನು ಭಾರತ ಬಳಸುತ್ತಿದೆ. 2017ರಲ್ಲಿ ನಡೆಸಿರುವ ಸಮೀಕ್ಷೆಯೊಂದರಲ್ಲಿ ಚಿತ್ರದುರ್ಗ ಜಿಲ್ಲೆಯ 5 ತಾಲ್ಲೂಕುಗಳು ಒಳಗೊಂಡು ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1199 ಗ್ರಾಮ ಪಂಚಾಯಿತಿಗಳಲ್ಲಿ ಅಂತರ್ಜಲದ ಮಿತಿಮೀರಿದ ಬಳಕೆಯಿಂದ ಅಂತರ್ಜಲಮಟ್ಟ ಅಪಾಯಕಾರಿ ಸ್ಥಿತಿ ತಲುಪಿದೆ. ಹೀಗಾಗಿ, ಈ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆ ಸಾಧಿಸಲು ಅಟಲ್ ಭೂಜಲ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಕೃತಿಯಲ್ಲಿರುವ ಎಲ್ಲಾ ಗಿಡಮರಗಳಿಗೆ, ಜೀವರಾಶಿಗೆ ಅನಿವಾರ್ಯವಾಗಿ ಬೇಕಿರುವ ನೀರು, ಭೂಮಿಯ ಮೇಲೆ ಮತ್ತು ಒಳಗೆ ಶೇ. 25 ರಷ್ಟು ಮಾತ್ರ ಉಪಯೋಗಕ್ಕೆ ಯೋಗ್ಯವಾಗಿದೆ.

ಅಂತರ್ಜಲ ಸಂರಕ್ಷಿಸುವ ನಿಟ್ಟಿನಲ್ಲಿ ರೈತರು ಹನಿ ನೀರಾವರಿ, ತುಂತುರು ನೀರಾವರಿ ಭೂಹೊದಿಕೆಯಂತಹ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಳೆಯ ನೀರನ್ನು ಸಂಗ್ರಹಿಸುವ, ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಬೇಕು ಎಂದು ಅಟಲ್ ಭೂಯೋಜನೆಯ ಜಿಲ್ಲಾ ಕಚೇರಿಯ ಅಧಿಕಾರಿ ಡಿ.ರವಿಕುಮಾರ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನೆಟಾಫಿಮ್ ಸಂಸ್ಥೆಯ ಬೇಸಾಯ ತಜ್ಞ ಅಂಜನಪ್ಪ, ಫೈಲೋ ಸಂಸ್ಥೆ ಪ್ರತಿನಿಧಿ ಡಾ. ಬಿ.ಎಂ.ಕಿರಣ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ್ ಅಂತರ್ಜಲ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ನಂತರ ಕೃಷಿ ತರಬೇತಿ ಕೇಂದ್ರದ ಸಮೀಪ ಇರುವ ಜವಳಿಫಾರಂಗೆ ರೈತರನ್ನು ಕರೆದೊಯ್ದು ಸಮಗ್ರ ಕೃಷಿ ಪದ್ಧತಿ ಕುರಿತು ಕೃಷಿ ಅಧಿಕಾರಿ ಸುಧಾ ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.