ADVERTISEMENT

ಹಿರಿಯೂರು: ತೇರುಮಲ್ಲೇಶ್ವರ ಬ್ರಹ್ಮರಥೋತ್ಸವದಲ್ಲಿ ಜನಸಾಗರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 13:53 IST
Last Updated 13 ಫೆಬ್ರುವರಿ 2025, 13:53 IST
ಹಿರಿಯೂರು ನಗರದ ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಬ್ರಹ್ಮರಥೋತ್ಸವದಲ್ಲಿ ನೆರೆದಿದ್ದ ಭಕ್ತಸಮೂಹ
ಹಿರಿಯೂರು ನಗರದ ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಬ್ರಹ್ಮರಥೋತ್ಸವದಲ್ಲಿ ನೆರೆದಿದ್ದ ಭಕ್ತಸಮೂಹ   

ಹಿರಿಯೂರು: ದಕ್ಷಿಣ ಕಾಶಿ ಎಂದು ಹೆಸರಾಗಿರುವ ನಗರದ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಬೀರೇನಹಳ್ಳಿಯ ಮಜುರೆ ಕರಿಯಣ್ಣನಹಟ್ಟಿ ಗ್ರಾಮದ ವೀರಕರಿಯಣ್ಣ ದೇವರನ್ನು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಕರೆತರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಪೂಜೆ ಸಲ್ಲಿಸುವ ಮೂಲಕ ದೇವರನ್ನು ಬರಮಾಡಿಕೊಂಡರು. ನಂತರ ದೇಗುಲ ನಿರ್ಮಾಣಕ್ಕೆ ಕಾರಣಳಾದ ಹೇಮರಡ್ಡಿ ಮಲ್ಲಮ್ಮ ಊರೆಗೋಲಾಗಿ ಬಳಸುತ್ತಿದ್ದಳು ಎನ್ನಲಾದ ಶಿವಧನುಸ್ಸನ್ನು ಸಮೀಪದ ವೇದಾವತಿ ನದಿಗೆ ಒಯ್ದು ಗಂಗಾಸ್ನಾನ ನೆರವೇರಿಸಿ ತರಲಾಯಿತು. ತಹಶೀಲ್ದಾರ್ ರಾಜೇಶ್ ಕುಮಾರ್ ಸಮಕ್ಷಮದಲ್ಲಿ ಸಚಿವ ಡಿ. ಸುಧಾಕರ್ ಅವರು ತೇರುಮಲ್ಲೇಶ್ವರ, ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ದೇವರುಗಳಿಗೆ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಚರ್ಮವಾದ್ಯಗಳ ಮೆರವಣಿಗೆಯೊಂದಿಗೆ ಉತ್ಸವಮೂರ್ತಿಗಳನ್ನು ಅಲಂಕರಿಸಿದ ರಥಕ್ಕೆ ಕರೆತಂದು ಕೂರಿಸಿದ ತಕ್ಷಣ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದ ಮುಂಭಾಗದಿಂದ ಸಿದ್ದನಾಯಕ ವೃತ್ತದವರೆಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ‘ಹರಹರ ಮಹಾದೇವ್’ ಎಂಬ ಉದ್ಘೋಷದ ನಡುವೆ ರಥವು ನಿಧಾನಕ್ಕೆ ಸಾಗಿತು. ಉತ್ಸವದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ, ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮಿಕಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಎಂ.ಎಸ್.ಈರಲಿಂಗೇಗೌಡ, ಕಂದಿಕೆರೆ ಸುರೇಶ್ ಬಾಬು, ಗೌರಿಶಂಕರ್, ಜಿ.ಎಲ್.ಮೂರ್ತಿ, ಗುರುಪ್ರಸಾದ್, ಜ್ಞಾನೇಶ್, ವಿ.ಶಿವಕುಮಾರ್, ಗಿರೀಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್, ಮಾಜಿ ಅಧ್ಯಕ್ಷ ವಿಶ್ವನಾಥ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಸಿದ್ದನಾಯಕ ವೃತ್ತದಲ್ಲಿ ಸಾವಿರಾರು ಭಕ್ತರು ದೇವರಿಗೆ ಹರಕೆ ಸಲ್ಲಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ರಥ ನಿಲ್ಲುವ ಆವರಣವನ್ನು  ಹೂ–ಹಣ್ಣು ಮಾರಾಟ ಮಾಡುವ ಹತ್ತಾರು ತಳ್ಳುಗಾಡಿಗಳು ಆಕ್ರಮಿಸಿಕೊಂಡಿದ್ದರಿಂದ ಭಕ್ತರಿಗೆ ಸ್ಥಳವಿಲ್ಲದಂತಾಗಿತ್ತು.

ವಿಶೇಷ: ಈ ಬಾರಿ ಬ್ರಹ್ಮರಥಕ್ಕೆ ಮಾಡಿದ್ದ ಹೂವಿನ ಅಲಂಕಾರ ಗಮನ ಸೆಳೆಯಿತು. ರಥದ ಮುಂಭಾಗದಲ್ಲಿ ಹಾಕಿದ್ದ ಸೇವಂತಿಗೆ ಹೂವಿನ ಬೃಹತ್ ಹಾರ ಕಣ್ಮನ ಸೆಳೆಯುವಂತಿತ್ತು.

ಮುಕ್ತಿ ಬಾವುಟ ಹರಾಜು: ಬ್ರಹ್ಮರಥೋತ್ಸವಕ್ಕೆ ಮೊದಲು ಹರಾಜಾದ ಮುಕ್ತಿ ಬಾವುಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ₹ 26.50 (2023ರಲ್ಲಿ ₹ 10 ಲಕ್ಷ, 2024ರಲ್ಲಿ ₹ 18 ಲಕ್ಷಕ್ಕೆ ಸುಧಾಕರ್ ಪಡೆದಿದ್ದರು) ಲಕ್ಷಕ್ಕೆ ಪಡೆಯುವ ಮೂಲಕ ಸತತ ಮೂರನೇ ಬಾರಿಗೆ ಮುಕ್ತಿ ಬಾವುಟ ಪಡೆದು ದಾಖಲೆ ನಿರ್ಮಿಸಿದರು.

ಮಳೆ–ಬೆಳೆಗೆ ಪ್ರಾರ್ಥನೆ: ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು ನಿರ್ವಿಘ್ನವಾಗಿ ನಡೆಯಬೇಕು. ರೈತರೂ ಸೇರಿದಂತೆ ಎಲ್ಲರೂ ನೆಮ್ಮದಿ ಜೀವನ ನಡೆಸುವಂತಾಗಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದಾಗಿ ಸಚಿವ ಡಿ.ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.

ಸಂಜೆ ಚಂದ್ರಮೌಳೇಶ್ವರ ಹಾಗೂ ಉಮಾಮಹೇಶ್ವರ ಸ್ವಾಮಿ ರಥೋತ್ಸವ ನಡೆಯಿತು. ಒಂದೇ ದಿನ ಮೂರು ರಥಗಳನ್ನು ಎಳೆಯುವುದು ಉತ್ಸವದ ಮತ್ತೊಂದು ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.