ಹಿರಿಯೂರು: ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಒಂದೇ ಒಂದು ರಸ್ತೆ, ಚರಂಡಿ, ಶೌಚಾಲಯ ಕಾಣದ ಊರೊಂದು ಇದೆ ಎಂದರೆ ಅಚ್ಚರಿಯಾಗುತ್ತದೆ. ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರಪ್ಪನಹಟ್ಟಿ ಅಂತಹ ಕುಖ್ಯಾತಿಗೆ ಪಾತ್ರವಾಗಿರುವ ಊರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ವಿವಿಧ ಯೋಜನೆಗಳಡಿ ರಾಜ್ಯದ ಪ್ರತಿ ಹಳ್ಳಿಯಲ್ಲೂ ಒಂದಲ್ಲ ಒಂದು ರೀತಿಯ ಅಭಿವೃದ್ಧಿ ಕಾಮಗಾರಿ ಕಾಣಬಹುದು. ಆದರೆ, ಅಂತಹ ಸೌಭಾಗ್ಯ ಸೂರಪ್ಪನಹಟ್ಟಿಗೆ ಇಂದಿಗೂ ದೊರೆತಿಲ್ಲ. ಅಂದಾಜು 1,000 ಜನಸಂಖ್ಯೆ ಇರುವ ಹಳ್ಳಿಯಲ್ಲಿ ಚರಂಡಿ ಇಲ್ಲದ ಕಾರಣಕ್ಕೆ ಮನೆಯ ತ್ಯಾಜ್ಯವೆಲ್ಲ ಓಣಿಯ ಮಧ್ಯದಲ್ಲಿ ಹರಿದು ಹೋಗುತ್ತದೆ. ಈ ಊರು ಮಳೆ ಬಂದಾಗ ಕೆಸರು ಗದ್ದೆಯಾದರೆ, ಮಳೆ ಇಲ್ಲದ ಸಮಯದಲ್ಲಿ ನೀರಾವರಿ ಜಮೀನಿನಂತೆ ಕಾಣುತ್ತದೆ. ಬಯಲು ಶೌಚಮುಕ್ತ ಎನ್ನುವುದು ಈ ಊರಿಗೆ ಇಂದಿಗೂ ಕನಸಾಗಿ ಉಳಿದಿದೆ.
‘ಗ್ರಾಮ ಪಂಚಾಯಿತಿ ಸದಸ್ಯರಿಂದ ಆರಂಭಿಸಿ ವಿಧಾನಸೌಧದವರೆಗಿನ ಎಲ್ಲ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಪ್ರಯೋಜನ ಮಾತ್ರ ಶೂನ್ಯ. ನಮ್ಮೂರು ಒಂದರ್ಥದಲ್ಲಿ ಶಾಪಗ್ರಸ್ತ ಪಟ್ಟವನ್ನು ಶಾಶ್ವತವಾಗಿ ಪಡೆದಿದ್ದು, ಅದ್ಯಾವ ಪುಣ್ಯಾತ್ಮ ಶಾಪ ವಿಮೋಚನೆಗೆ ಬರುತ್ತಾನೋ ತಿಳಿಯದು’ ಎನ್ನುತ್ತಾರೆ ಕಲ್ಲುವಳ್ಳಿ ಭಾಗದ ನೀರಾವರಿ ಹೋರಾಟ ಸಮಿತಿಯ ಕಾರ್ಯದರ್ಶಿ ಎಸ್.ಆರ್. ಕೃಷ್ಣಪ್ಪ.
ಗಿಡನೆಟ್ಟರೂ ಕಣ್ಣು ತೆರೆಯದ ವ್ಯವಸ್ಥೆ: ‘ಹಿಂದಿನ ವರ್ಷ ಮಳೆಗಾಲದಲ್ಲಿ ಇಡೀ ಊರು ಕೆಸರುಗದ್ದೆಯಂತಾಗಿತ್ತು. ಸ್ಥಳೀಯ ಆಡಳಿತದ ಗಮನ ಸೆಳೆಯಬೇಕೆಂದು ಇಡೀ ಊರಿನ ರಸ್ತೆಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಗಿತ್ತು. ಈ ಬಾರಿಯ ಕ್ರಿಯಾಯೋಜನೆಯಲ್ಲಿ ಸೇರಿಸುತ್ತೇವೆ. ಕೇಂದ್ರದ ಅನುದಾನಕ್ಕೆ ಕಾಯುತ್ತಿದ್ದೇವೆ ಎಂಬ ಸಿದ್ಧ ಉತ್ತರ ಬರುತ್ತದೆ’ ಎನ್ನುತ್ತಾರೆ ಗ್ರಾಮದ ಯುವಕರು.
‘ನಮ್ಮ ಊರು ನಮ್ಮ ರಸ್ತೆ, ನಮ್ಮ ಹೊಲ ನಮ್ಮ ರಸ್ತೆ, ಸ್ವಚ್ಛಗ್ರಾಮ ಇಂತಹ ಯಾವುದೇ ಯೋಜನೆಗಳು ನಮ್ಮೂರಿಗೆ ದೊರೆತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂರಪ್ಪನಹಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಸತ್ತು ಹೋಗಿದೆ. ಬದುಕಿದ್ದರೆ ಯಾವುದಾದರೊಂದು ಯೋಜನೆಯಡಿ ನಮ್ಮ ಕನಿಷ್ಟ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ನಾವು ಕೊಟ್ಟಿರುವ ಮನವಿಗಳನ್ನು ಕಡತ ಮಾಡಿ ಇಟ್ಟಿದ್ದರೆ ಅದು ಗಿನ್ನಿಸ್ ದಾಖಲೆ ಸೇರುತ್ತಿತ್ತು. ಸಂಬಂಧಿಸಿದವರು ಕುಂಟು ನೆಪ ಹೇಳುವುದು ಬಿಟ್ಟು, ನಮ್ಮ ಊರಿಗೆ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಲಿ. ಇಲ್ಲವೇ ಸೂರಪ್ಪನಹಟ್ಟಿ ಭಾರತದಲ್ಲಿ ಇಲ್ಲ’ ಎಂದು ಘೋಷಿಸಲಿ ಎಂದು ಕೃಷ್ಣಪ್ಪ ಸವಾಲು ಹಾಕುತ್ತಾರೆ.
‘ದಿಂಡಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಪಂಚಾಯಿತಿ ಆಡಳಿತ ನೀರು ಪೂರೈಕೆಗೆ ಹೆಚ್ಚಿನ ಒತ್ತು ನೀಡಿದೆ. ಸೂರಪ್ಪನಹಟ್ಟಿಯವರು ಶೌಚಾಲಯ ನಿರ್ಮಿಸಿಕೊಳ್ಳುತ್ತೇವೆ ಎಂದರೆ ಗ್ರಾಮ ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡುತ್ತೇವೆ. ಉಳಿದಂತೆ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಶೀಘ್ರವೇ ಕ್ರಿಯಾ ಯೋಜನೆ ರೂಪಿಸಿ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.