ADVERTISEMENT

ಹಿರಿಯೂರು ನಗರಸಭೆ; ಸಜ್ಜಾದ ಆಕಾಂಕ್ಷಿಗಳು, ಟಿಕೆಟ್‌ ಪಡೆಯಲು ಪೈಪೋಟಿ

ಗರಿಗೇದರಿದ ರಾಜಕೀಯ ಚಟುವಟಿಕೆ

ಕೆ.ಎಸ್.ಪ್ರಣವಕುಮಾರ್
Published 3 ಮೇ 2019, 20:00 IST
Last Updated 3 ಮೇ 2019, 20:00 IST
   

ಚಿತ್ರದುರ್ಗ: ಹಿರಿಯೂರು ನಗರಸಭೆ ಚುನಾವಣೆಗೆ ಮೇ 29ರಂದು ಮತದಾನ ನಡೆಯಲಿದ್ದು, ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೇದರಿವೆ.

ಲೋಕಸಭಾ ಚುನಾವಣೆ ಮುಕ್ತಯವಾದ ಬೆನ್ನಲ್ಲೇ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಲೆಕ್ಕಾಚಾರ ಆರಂಭವಾಗಿವೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಟಿಕೆಟ್‌ ಪಡೆಯಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಈಗಾಗಲೇ ಪಕ್ಷದ ಮುಖಂಡರನ್ನು ಎಡತಾಕುತ್ತಿದ್ದಾರೆ.

ಈ ಮೊದಲು ಇಲ್ಲಿ 27 ವಾರ್ಡ್‌ಗಳಿದ್ದವು. ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಬಡ್ತಿ ಹೊಂದಿದ ನಂತರ 31 ವಾರ್ಡ್‌ಗಳನ್ನಾಗಿ ವಿಂಗಡಿಸಲಾಗಿದೆ. ಈ ಬಾರಿಯ ಚುನಾವಣೆ ಸಾರ್ವಜನಿಕರಲ್ಲಿ ಹೆಚ್ಚು ಕುತೂಹಲ ಉಂಟು ಮಾಡಿದೆ.

ADVERTISEMENT

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 8, ಜೆಡಿಎಸ್‌ನಿಂದ 5, ಬಿಎಸ್ಆರ್ ಕಾಂಗ್ರೆಸ್‌ನಿಂದ 3 ಹಾಗೂ 11 ಮಂದಿ ಸದಸ್ಯರು ಪಕ್ಷೇತರರಾಗಿ ಚುನಾಯಿತರಾಗಿದ್ದರು. ವಾರ್ಡ್‌ಗಳ ಸಂಖ್ಯೆ ಪುನರ್‌ ವಿಂಗಡನೆ ನಂತರ 31 ವಾರ್ಡ್‌ಗಳಿಗೆ ಇದೇ ಮೊದಲ ಬಾರಿ ಚುನಾವಣೆ ನಡೆಯುತ್ತಿದೆ. ಸ್ಥಳೀಯ ಸಂಸ್ಥೆಗಳ ಪೈಕಿ ಎರಡನೇ ಹಂತದ ಚುನಾವಣೆಗೆ ಹಿರಿಯೂರು ನಗರಸಭೆಯೂ ಸಜ್ಜಾಗಿದೆ.

ಲೋಕಸಭೆಗೂ ಮುನ್ನ ಇಲ್ಲಿನ ನಗರಸಭೆಗೆ ಚುನಾವಣೆ ನಡೆಯಬಹುದೆಂದು ಹಾಲಿ ಸದಸ್ಯರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಇಷ್ಟೇ ಅಲ್ಲದೆ, ಹೊಸ ಆಕಾಂಕ್ಷಿಗಳು ಸಿದ್ಧತೆಯಲ್ಲಿ ತೊಡಗಿದ್ದರು. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಂದ ಟಿಕೆಟ್‌ ಸಿಗದಿದ್ದರೆ, ಪಕ್ಷೇತರರಾಗಿ ಕಣಕ್ಕೆ ಇಳಿಯಲು ಕೆಲವರು ನಿರ್ಧರಿಸಿದ್ದಾರೆ.

‘ನಗರಸಭೆಗೆ ಚುನಾವಣೆ ಘೋಷಣೆ ಆಗುವುದು ಯಾವಾಗ’ ಎಂದು ಕಾಯುತ್ತಿದ್ದ ಕೆಲವರು, ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆಯಿಂದ ಇಲ್ಲಿಯವರೆಗೂ ವಾರ್ಡ್‌ಗಳ ಮತದಾರರನ್ನು ತಲುಪುವ ಪ್ರಯತ್ನದಲ್ಲಿದ್ದಾರೆ. ಹೊಸ ಆಕಾಂಕ್ಷಿಗಳು ಹುಟ್ಟಿಕೊಂಡ ಬೆನ್ನಲ್ಲೇ ಬೆಂಬಲಿಗರ ಮೂಲಕ ಮತದಾರರನ್ನು ಸಂಘಟಿಸಲು ಮುಂದಾಗುತ್ತಿದ್ದಾರೆ.

ಆಕಾಂಕ್ಷಿಗಳು ಮತದಾರರ ಮನೆಗೆ ತೆರಳಿ ‘ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಗೆದ್ದರೆ, ವಾರ್ಡ್‌ ಅಭಿವೃದ್ಧಿಯ ಜತೆಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂಬ ಭರವಸೆಯನ್ನೂ ನೀಡುತ್ತಿದ್ದಾರೆ.

31 ವಾರ್ಡ್ ವ್ಯಾಪ್ತಿಯಲ್ಲಿ 55 ಮತಗಟ್ಟೆಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇಲ್ಲಿ 21,964 ಪುರುಷ ಹಾಗೂ 23,013 ಸಾವಿರ ಮಹಿಳಾ ಮತದಾರರು ಇದ್ದಾರೆ. ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ.

‘ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದಂತೆಲ್ಲ ಟಿಕೆಟ್‌ ಪಡೆಯಲು ಪೈಪೋಟಿ ಹೆಚ್ಚಾಗಲಿದೆ. ಹಾಲಿ ಸದಸ್ಯರಿಗೆ ಇಲ್ಲವೇ ಅವರ ಕುಟುಂಬದವರಿಗೆ ಪಕ್ಷಗಳು ಟಿಕೆಟ್‌ ನೀಡುವ ವಿಶ್ವಾಸವೂ ಇದೆ. ಈ ಬಾರಿ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರೇ ಇರುವುದರಿಂದ ಆ ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.