ADVERTISEMENT

ಹಿರಿಯೂರು: ವೃದ್ಧ ಪತಿಯ ಮೇಲೆ ಪತ್ನಿ ಹಲ್ಲೆ; ಸಾವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:08 IST
Last Updated 31 ಜನವರಿ 2026, 7:08 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಹಿರಿಯೂರು: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಜಗಳದಲ್ಲಿ ವೃದ್ಧ ಪತಿಯ ಮೇಲೆ ಪತ್ನಿ ಹಲ್ಲೆ ನಡೆಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ವೃದ್ಧ  ಮೃತಪಟ್ಟಿರುವ ಘಟನೆ ನಗರದ ವೇದಾವತಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. 

ಬೆಸ್ಕಾಂನಲ್ಲಿ ಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪುಟ್ಟಣ್ಣ (65) ಮೃತರು. ಅವರ ಪತ್ನಿ ಕವಿತಾ (55) ಕೊಲೆ ಆರೋಪಿ.

ADVERTISEMENT

ಪತಿಯ ಮೇಲೆ ಹಲ್ಲೆ ನಡೆಸಿದ ಪತ್ನಿ, ‘ಗಂಡ ಬಿದ್ದು ಗಾಯಗೊಂಡಿದ್ದಾನೆ’ ಎಂದು ಕಥೆ ಕಟ್ಟಿ ಮಾರನೆ ದಿನ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಪುಟ್ಟಣ್ಣ ಮೃತಪಟ್ಟಿದ್ದಾರೆ. 

ಘಟನೆಯ ವಿವರ

ಪುಟ್ಟಣ್ಣ ಮತ್ತು ಕವಿತಾ ದಂಪತಿ ನಡುವೆ ಕುಟುಂಬದ ವಿಚಾರಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ಜಗಳ ನಡೆದಿದ್ದು, ಕವಿತಾ ಬಲವಾದ ಆಯುಧದಿಂದ ಪತಿಯ ತಲೆಗೆ, ಎರಡೂ ಮೊಳಕಾಲುಗಳಿಗೆ ಹೊಡೆದಿದ್ದಾರೆ. ಹೊಡೆತಗಳ ನೋವಿನಿಂದ ನರಳುತ್ತಿದ್ದ ಪುಟ್ಟಯ್ಯ ಅವರನ್ನು ಗುರುವಾರ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯವರ ದೂರಿನ ಮೇರೆಗೆ ವಿಚಾರಣೆಗೆ ಬಂದ ಪೊಲೀಸರಿಗೆ ‘ಪರಮೇನಹಳ್ಳಿ ಸಮೀಪ ಜಮೀನಿಗೆ ಹೋಗುವಾಗ ಪತಿ ಬಿದ್ದು ಗಾಯಗೊಂಡಿದ್ದಾರೆ’ ಎಂದು ಕವಿತಾ ಹೇಳಿಕೆ ನೀಡಿದ್ದರು.

ಗಾಯದ ಸ್ವರೂಪ ನೋಡಿ ಸಂಶಯಗೊಂಡ ಪೊಲೀಸರು ವಿಚಾರಣೆ ಮಾಡಿದಾಗ, ‘ಅಪಘಾತದಲ್ಲಿ ಗಾಯಗೊಂಡಿದ್ದು, ಬೆಳಿಗ್ಗೆ ಆಸ್ಪತ್ರೆಗೆ ಕರೆತಂದಿದ್ದೇನೆ’ ಎಂದು ಹೇಳಿದ್ದಾರೆ. ಕವಿತಾ ಅವರ ಹೇಳಿಕೆಯಂತೆ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ಅಪಘಾತ ಪ್ರಕರಣ ದಾಖಲಿಸಿದ್ದರು.

‘ಶುಕ್ರವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೆ ಪುಟ್ಟಯ್ಯ ಮೃತಪಟ್ಟ ನಂತರ ಕ್ಷಣಕ್ಕೊಮ್ಮೆ ಹೇಳಿಕೆ ಬದಲಿಸುತ್ತಿದ್ದ ಕವಿತಾ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಮೊದಲು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಶುಕ್ರವಾರ ನಗರ ಠಾಣೆಗೆ ವರ್ಗಾಯಿಸಿದ್ದು, ಕೊಲೆ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್‌ಪಿ ರಂಜಿತ್ ಕುಮಾರ್ ಭಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್, ಡಿವೈಎಸ್ಪಿ ಶಿವಕುಮಾರ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಆನಂದ್, ಎಸ್ಐ ಅನುಸೂಯಮ್ಮ, ನಗರಠಾಣೆ ಇನ್‌ಸ್ಪೆಕ್ಟರ್ ಮಹಮದ್ ಸಿರಾಜ್ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.