ADVERTISEMENT

ಐತಿಹಾಸಿಕ ತಿಪ್ಪೇರುದ್ರಸ್ವಾಮಿ ರಥೋತ್ಸವ ಇಂದು

ಜಮಾಯಿಸಿದ ಅಂಗಡಿಗಳು* ಭರ್ಜರಿ ವ್ಯಾಪಾರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 6:09 IST
Last Updated 20 ಮಾರ್ಚ್ 2022, 6:09 IST
ನಾಯಕನಹಟ್ಟಿ ಜಾತ್ರೆಗೆ ಸಿದ್ಧಗೊಂಡಿರುವ ತಿಪ್ಪೇರುದ್ರಸ್ವಾಮಿ ಮಹಾರಥ.
ನಾಯಕನಹಟ್ಟಿ ಜಾತ್ರೆಗೆ ಸಿದ್ಧಗೊಂಡಿರುವ ತಿಪ್ಪೇರುದ್ರಸ್ವಾಮಿ ಮಹಾರಥ.   

ನಾಯಕನಹಟ್ಟಿ: ಅವಧೂತ ಪರಂಪರೆಯ ಕಾಯಕಯೋಗಿ ಗುರು ತಿಪ್ಪೇರುದ್ರಸ್ವಾಮಿಯ ಮಹಾರಥೋತ್ಸವ ಮಾರ್ಚ್ 20ರಂದು ಮಧ್ಯಾಹ್ನ 3ಕ್ಕೆ ಜರುಗಲಿದೆ. ಸಕಲ ಸಿದ್ಧತೆ ನಡೆದಿದೆ.

ರಥೋತ್ಸವದ ಅಂಗವಾಗಿ ಮಧ್ಯ ಕರ್ನಾಟಕದ ಮೂಲೆ-ಮೂಲೆಗಳಿಂದ ಭಕ್ತರ ದಂಡು ನಾಯಕನಹಟ್ಟಿಯಲ್ಲಿ ಶನಿವಾರ ಬೀಡುಬಿಟ್ಟಿದೆ. ಹೊರಮಠ-ಒಳಮಠಗಳಲ್ಲಿ ಭಕ್ತರು ಸಾಲಗಟ್ಟಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಭಾನುವಾರ ಬೆಳಿಗ್ಗೆ 10ಕ್ಕೆ ಜನಪದ ಕಲಾಮೇಳದೊಂದಿಗೆ ವೃಷಭವಾಹನ ಸಹಿತ ಚಿಕ್ಕ ರಥೋತ್ಸವ ಜರುಗಲಿದೆ. ಇದೇ ವೇಳೆ ಮಂಗಳೂರಿನ ಚಂಡೆವಾದ್ಯ, ವೀರಗಾಸೆ, ಡೋಲು ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಲಿದೆ. ಮಧ್ಯಾಹ್ನ 2 ಗಂಟೆಗೆ ನಾಯಕನಹಟ್ಟಿ ಆಯ್ಯಂಗಾರರು ಮತ್ತು ಬಾಬುದಾರರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ನಂತರ ಮಕ್ತಿ ಬಾವುಟ ಹರಾಜಿನ ನಂತರ ತಳಕು, ಮನ್ನೇಕೋಟೆ ಭಕ್ತರಿಂದ ಮಹಾಮಂಗಳಾರತಿ ನಡೆಯಲಿದೆ.

ADVERTISEMENT

ಮಂಗಳಾರತಿ ಬಳಿಕ ಮಹಾರಥೋತ್ಸವದ ಧಾರ್ಮಿಕ ವಿಧಿ-ವಿಧಾನಗಳಿಗೆ ಚಾಲನೆ ಸಿಗಲಿದೆ. ಮಧ್ಯಾಹ್ನ ಪಲ್ಲಕ್ಕಿಯಲ್ಲಿ ವಿರಾಜಮಾನಗೊಂಡ ತಿಪ್ಪೇರುದ್ರಸ್ವಾಮಿ, ಆಂಜನೇಯ ದೇಗುಲದಲ್ಲಿ ಪೂಜೆ ಮುಗಿಸಿ, ಮಹಾರಥದತ್ತ ಸಾಗುತ್ತದೆ. ಅಲ್ಲಿ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ಮುಗಿದ ಮೇಲೆ ತಿಪ್ಪೇರುದ್ರಸ್ವಾಮಿಯ ರಥ ಸಿಂಹಾಸನ ಅಲಂಕಾರ ನಡೆಯಲಿದೆ.

ಭಕ್ತರ ಸಾಗರದಲ್ಲಿ ತಿಪ್ಪೇರುದ್ರಸ್ವಾಮಿಯ ರಥೋತ್ಸವ ಪಾದಗಟ್ಟೆಯತ್ತ ಸಾಗುತ್ತದೆ. ರಥಬೀದಿಯಲ್ಲಿ ಮಹಾರಥವನ್ನು ಭಕ್ತರು ಮಿಣಿ (ಹಗ್ಗ) ಹಿಡಿದು ಎಳೆಯಲಿದ್ದಾರೆ. ರಥ ಸಂಜೆ 5ರ ವೇಳೆಗೆ ಪಾದಗಟ್ಟೆ ತಲುಪಿ ಅಲ್ಲಿಂದ ಹಿಮ್ಮುಖ ಪಡೆಯಲಿದೆ. ಈ ಸಂದರ್ಭದಲ್ಲಿ ತಿಪ್ಪೇರುದ್ರಸ್ವಾಮಿಯ ಪ್ರಭಾವಳಿಯ ಪುನಃ ಅಲಂಕಾರ ನಡೆಯುತ್ತದೆ. ಹಿಮ್ಮುಖಗೊಂಡ ರಥ ಸ್ವಸ್ಥಾನಕ್ಕೆ ಬಂದು ನಿಲ್ಲಲಿದೆ.

ಬೆಂಡು ಬತ್ತಾಸ್ ಅಂಗಡಿ:
ಜಾತ್ರೆ ಅಂಗವಾಗಿ ಈಗಾಗಲೇ ಪಟ್ಟಣದಲ್ಲಿ ನೂರಾರು ಬೆಂಡು ಬತ್ತಾಸ್ ಅಂಗಡಿಗಳ ಸಾಲು ಹಾಕಿದ್ದಾರೆ. ಹೊರಮಠ-
ತೇರುಬೀದಿ- ಒಳಮಠದಲ್ಲಿನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈವಿಧ್ಯ ಅಂಗಡಿ ಮುಂಗಟ್ಟುಗಳು ಬಂದಿವೆ. ತರಹೇವಾರಿ ಅಂಗಡಿಗಳು ಜಾತ್ರೆಗೆ ಮೆರುಗನ್ನು ತಂದಿದೆ.

ಹೆಚ್ಚಿದ ಬಿಸಿಲಿನ ತಾಪ:
ಈ ಬಾರಿಯ ಜಾತ್ರೆಯ ಜನರಿಗೆ ಬಿಸಿಲಿನ ತಾಪ ಕಾಡಲಿದೆ. 35 ಡಿಗ್ರಿಯಷ್ಟು ಉಷ್ಣಾಂಶ ಕಂಡುಬಂದಿದ್ದು, ಭಕ್ತರು ನೆರಳಿಗಾಗಿ ಪರಿತಪಿಸುವಂತಾಗಿದೆ. ಅಂತರ್ಜಲ ಕೊರತೆಯ ಇದ್ದ ತೋಟಗಳು ಕಣ್ಮರೆಗೊಂಡಿವೆ. ಪಟ್ಟಣದಲ್ಲಿ ಇದ್ದ ಮರಗಳು ಕ್ಷೀಣಿಸಿದ್ದರಿಂದ ನೆರಳಿನ ಅಭಾವವನ್ನು ಜನರು ಎದುರಿಸುವಂತಾಗಿದೆ. ಅಲ್ಲಲ್ಲಿ ಕಾಣಸಿಗುವ ಮರಗಳಡಿ ಭಕ್ತರು ಆಶ್ರಯ ಪಡೆದುಕೊಂಡಿದ್ದಾರೆ.

ಅಧಿಕಾರಿಗಳ ಮೊಕ್ಕಾಂ
ಜಾತ್ರಾ ಪ್ರಯುಕ್ತ ತಹಶೀಲ್ದಾರ್, ಎನ್. ರಘುಮೂರ್ತಿ ವೃತ್ತ ನಿರೀಕ್ಷಕ ಸಮೀವುಲ್ಲಾ ಸೇರಿ ಹಲವು ಅಧಿಕಾರಿಗಳು ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸೌಲಭ್ಯಗಳ ಕೊರತೆ ಉಂಟಾಗದಂತೆ ಕ್ರಮವಹಿಸಲು ಅಧಿಕಾರಿಗಳ ತಂಡಗಳನ್ನು ಅವರು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.