ADVERTISEMENT

ಹೆಚ್ಚು ಬೆಲೆಗೆ ಬೀಜ ಮಾರಿದರೆ ಪರವಾನಿಗೆ ರದ್ದು: ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್

ಖಾಸಗಿ ಬೀಜ ಮಾರಾಟ ಮಳಿಗೆಗಳಿಗೆ ಸಹಾಯಕ ಕೃಷಿ ನಿರ್ದೇಶಕರ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 13:03 IST
Last Updated 28 ಜೂನ್ 2023, 13:03 IST
ಹೊಳಲ್ಕೆರೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ಅವರು ಬಿತ್ತನೆ ಬೀಜ ಮತ್ತು ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹೊಳಲ್ಕೆರೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ಅವರು ಬಿತ್ತನೆ ಬೀಜ ಮತ್ತು ಗೊಬ್ಬರ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.   

ಹೊಳಲ್ಕೆರೆ: ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ಪಟ್ಟಣದ ಬೀಜ, ಗೊಬ್ಬರ ಮಾರಾಟ ಮಳಿಗೆಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಬೀಜ, ಗೊಬ್ಬರ, ಕೀಟನಾಶಕ ಖರೀದಿಸಿದ ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಅಂಗಡಿಯ ಹೊರಗೆ ದರಪಟ್ಟಿ ಹಾಕಬೇಕು. ತೂಕ, ಅಳತೆಯಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ರೈತರು ಖಾಸಗಿ ಮಾರಾಟ ಮಳಿಗೆಗಳಿಂದ ಬೀಜ, ಗೊಬ್ಬರ ಖರೀದಿಸುವಾಗ ತಪ್ಪದೆ ರಸೀದಿ ಪಡೆಯಬೇಕು. ರೈತರು ಬಿತ್ತನೆ ಬೀಜ ಹಾಗೂ ರಸಗೂಬ್ಬರದ ಗುಣಮಟ್ಟವನ್ನು ಖಾತರಿಪಡಿಸಿಕೊಂಡು ಖರೀದಿಸಬೇಕು. ಕಳಪೆ ಬೀಜ, ಗೊಬ್ಬರ ಮಾರಾಟ ಮಾಡಿದರೆ, ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕೃಷಿ ಇಲಾಖೆಗೆ ದೂರು ನೀಡಬೇಕು ಎಂದು ಸೂಚಿಸಿದರು. 

ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮಳೆ ಆರಂಭವಾಗುವ ಲಕ್ಷಣಗಳಿದ್ದು, ಮುಂಜಾಗ್ರತಾ ಕ್ರಮವಾಗಿ ರೈತರಿಗೆ ಅಗತ್ಯವಿರುವಷ್ಟು ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ. ಮೆಕ್ಕೆಜೋಳ ಬಿತ್ತನೆಗೆ ಜುಲೈವರೆಗೆ ಸಮಯಾವಕಾಶವಿದ್ದು, ರೈತರು ಆತಂಕಪಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಕಸಬಾ, ರಾಮಗಿರಿ, ತಾಳ್ಯ ಹೋಬಳಿಗಳ ಸುಮಾರು 80 ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಗೋಪಿಕೃಷ್ಣ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.