ADVERTISEMENT

‘ಸ್ಥಳೀಯರೇ ಟ್ರಸ್ಟಿಗಳಾಗಬೇಕೆಂಬ ನಿಯಮವಿಲ್ಲ’

ಶಾಸಕ ಎಂ.ಚಂದ್ರಪ್ಪ ಪ್ರತಿಕ್ರಿಯೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:25 IST
Last Updated 8 ಜೂನ್ 2025, 16:25 IST

ಹೊಳಲ್ಕೆರೆ: ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮಕ್ಕೆ ಸ್ಥಳೀಯರೇ ಟ್ರಸ್ಟಿಗಳಾಗಬೇಕೆಂಬ ನಿಯಮ ಇಲ್ಲ ಎಂದು ಶ್ರೀರಾಮಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಪೃಥ್ವಿರಾಜ್ ಹೇಳಿದ್ದಾರೆ.

‘ಶಾಸಕ ಎಂ.ಚಂದ್ರಪ್ಪ ಸ್ಥಳೀಯರು ಮಾತ್ರ ಆಶ್ರಮದ ಸದಸ್ಯರಾಗಬೇಕೆಂದು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಅವರ ಈ ಮಾತಿಗೆ ಬದ್ಧರಾಗಿದ್ದರೆ ಹೊಳಲ್ಕೆರೆಯಲ್ಲಿ ಸಾಕಷ್ಟು ಸ್ಥಳೀಯ ಮುಖಂಡರು ಇದ್ದರೂ, ಚಳ್ಳಕೆರೆ ತಾಲ್ಲೂಕಿನ ನೀವೇಕೆ ಹೊಳಲ್ಕೆರೆ ಕ್ಷೇತ್ರಕ್ಕೆ ಬಂದು ಶಾಸಕರಾಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶ ಇರುವಂತೆ ಹೊರಗಿನವರು ಕೂಡ ಆಶ್ರಮದ ಆಡಳಿತದಲ್ಲಿ ಪಾಲ್ಗೊಳ್ಳಲು ಬೈಲಾದಲ್ಲಿ ಅವಕಾಶವಿದೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯರೇ ಆಶ್ರಮದ ವ್ಯವಸ್ಥೆಯಲ್ಲಿ ಇರಬೇಕು ಎಂಬ ಶಾಸಕರ ಹೇಳಿಕೆಯಂತೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕೂಡ ಹೊಳಲ್ಕೆರೆ ತಾಲ್ಲೂಕಿನ ಹಿರೇಕಂದವಾಡಿ ಗ್ರಾಮದವರು. ಅವರು ಚಿತ್ರದುರ್ಗದಲ್ಲಿ ಶೂನ್ಯದಿಂದ ಗುರುಪೀಠವನ್ನು ಪ್ರಾರಂಭಿಸಿ ಮಠವು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಶ್ರೀಗಳ ನೇತೃತ್ವದಲ್ಲಿ ಮಲ್ಲಾಡಿಹಳ್ಳಿ ಆಶ್ರಮ ಕೂಡ ಉನ್ನತಿ ಹೊಂದಲಿದೆ ಎಂಬ ವಿಶ್ವಾಸ ಇದೆ. ಆಶ್ರಮದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಸ್ಪಂದಿಸಿರುವ ಸ್ವಾಮೀಜಿ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ ಎಂದಿದ್ದಾರೆ.

ADVERTISEMENT

ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಬಗ್ಗೆ ಇಷ್ಟು ವರ್ಷ ಮಾತನಾಡದ ಶಾಸಕ ಎಂ.ಚಂದ್ರಪ್ಪ ಮಾದಾರ ಚನ್ನಯ್ಯ ಸ್ವಾಮೀಜಿ ಮಠದ ಜವಾಬ್ದಾರಿ ವಹಿಸಿಕೊಂಡಾಗ ಪ್ರತಿಕ್ರಿಯೆ ನೀಡಿರುವುದು ಏಕೆ? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.