ಹೊಳಲ್ಕೆರೆ: ಸರ್ಕಾರಿ ನೌಕರರು ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಅವರು ಮಾತನಾಡಿದರು.
‘ಕಂದಾಯ ಇಲಾಖೆ ನೌಕರರ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ಷೇಪಗಳಿವೆ. ಸರ್ಕಾರಿ ನೌಕರರು, ಅಧಿಕಾರಿಗಳು ಸಾರ್ವಜನಿಕರನ್ನು ವಿನಾ ಕಾರಣ ಕಚೇರಿಗಳಿಗೆ ಅಲೆದಾಡಿಸದೇ, ಸಕಾಲದಲ್ಲಿ ಅವರ ಕೆಲಸ ಮಾಡಿಕೊಡಬೇಕು. ಕೆಲಸ ವಿಳಂಬವಾದರೆ ರೈತರು, ಸಾಮಾನ್ಯ ವರ್ಗದವರು ಪರಿತಪಿಸಬೇಕಾಗುತ್ತದೆ. ಅವರ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವುದಕ್ಕಾಗಿ ಸರ್ಕಾರ ಲ್ಯಾಪ್‍ಟಾಪ್ ಕೊಟ್ಟಿದೆ ಎಂದರು.
‘ಜನನ–ಮರಣ ಪ್ರಮಾಣ ಪತ್ರ, ಪಹಣಿ, ಆಸ್ತಿ ಹದ್ದುಬಸ್ತು ಸೇರಿದಂತೆ ಪ್ರತಿಯೊಂದು ನಿಮ್ಮ ಕೈಯಿಂದಲೇ ಆಗಬೇಕು. ನಿಮ್ಮ ನ್ಯಾಯಯುತ ಬೇಡಿಕೆಗಳಿಗೆ ಮುಷ್ಕರ ನಡೆಸುವುದು ತಪ್ಪಲ್ಲ. ಸರ್ಕಾರ ನಿಮಗೆ ಸ್ಪಂದಿಸಿದೆ ಎಂದು ಚಂದ್ರಪ್ಪ ಹೇಳಿದರು.
ತಹಶೀಲ್ದಾರ್ ಬೀಬಿ ಫಾತಿಮಾ, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ ನಾಯ್ಕ್, ಮುರುಗೇಶ್, ಡಿ.ಸಿ.ಮೋಹನ್, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.