ಹೊಳಲ್ಕೆರೆ: ‘ಉಪನ್ಯಾಸಕರು ಶ್ರಮವಹಿಸಿ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಿಸಬೇಕು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ತಿಮ್ಮಯ್ಯ ಸೂಚನೆ ನೀಡಿದರು.
ತಾಲ್ಲೂಕಿನ ವಾಗ್ದೇವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಚಿಂಥನ– ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಉಪನ್ಯಾಸಕರು ಪ್ರತೀ ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಗಮನ ಕೊಡಬೇಕು. ಘಟಕ ಪರೀಕ್ಷೆ, ಕಿರು ಪರೀಕ್ಷೆ, ಪರಿಹಾರ ಭೋಧನೆ, ನಿಯಮಿತ ಮೌಲ್ಯಮಾಪನ, ಮಾರ್ಗದರ್ಶನದ ಮೂಲಕ ವಿಷಯಗಳು ಅರ್ಥವಾಗುವಂತೆ ನೋಡಿಕೊಳ್ಳಬೇಕು. ಪೋಷಕರು ಕಾಲೇಜಿಗೆ ಗೈರಾಗುವ ವಿದ್ಯಾರ್ಥಿಗಳನ್ನು ಮನವೊಲಿಸಿ ನಿತ್ಯ ಕಾಲೇಜಿಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಹುಟ್ಟಿಸದೆ ಆತ್ಮವಿಶ್ವಾಸ ತುಂಬಬೇಕು. ಪರೀಕ್ಷೆ ಹತ್ತಿರವಾದಾಗ ಓದಲು ಒತ್ತಡ ಹಾಕುವ ಬದಲು ಆರಂಭದಿಂದಲೇ ವ್ಯವಸ್ಥಿತ ಅಧ್ಯಯನ ಮಾಡಲು ಪ್ರೇರೇಪಿಸಬೇಕು’ ಎಂದರು.
ಪಿಯುಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ 28ನೇ ಸ್ಥಾನದಲ್ಲಿದೆ. ಹೊಳಲ್ಕೆರೆ ತಾಲ್ಲೂಕು ಉತ್ತಮ ಫಲಿತಾಂಶ ಪಡೆದಿದ್ದು, ಇನ್ನೂ ಫಲಿತಾಂಶವನ್ನು ಸುಧಾರಿಸಲು ಪ್ರಾಂಶುಪಾಲರು, ಉಪನ್ಯಾಸಕರು ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ 19 ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಜೊತೆಗೆ ವಾಗ್ದೇವಿ ಕಾಲೇಜಿನ ಮುಖ್ಯಸ್ಥ ಸಿದ್ದಲಿಂಗ ಸ್ವಾಮಿ, ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಪ್ರಾಂಶುಪಾಲದ ಸಂಘದ ಅಧ್ಯಕ್ಷ ದೇವೇಂದ್ರಪ್ಪ, ಎಂಎಂ ಕಾಲೇಜು ಪ್ರಾಂಶುಪಾಲ ಅಶೋಕ್, ರಂಗನಾಥ್, ಅಬ್ದುಲ್ ಖದ್ದೂಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.