ಹೊಸದುರ್ಗ: ಕಳೆದ ಒಂದು ತಿಂಗಳಿನಿಂದ ಮಳೆಯಾಗದ ಕಾರಣ ಮೊಳಕೆಯೊಡೆದು ಆಗ ತಾನೆ ಚಿಗುರುತ್ತಿದ್ದ ಬೆಳೆಗಳೆಲ್ಲಾ ನೆಲಕಚ್ಚಿವೆ. ರಾಜ್ಯ, ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದ್ದರೂ ತಾಲ್ಲೂಕಿನಲ್ಲಿ ಮಾತ್ರ ಮಳೆ ಇಲ್ಲದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಮೇ ತಿಂಗಳಿನಲ್ಲಿಯೇ ಸಾವೆ ಬಿತ್ತನೆ ಮಾಡಲಾಗುತ್ತಿತ್ತು. ಬೆಳೆ ಭೂಮಿ ಬಿಟ್ಟು ಮೇಲೇಳುವ ಸಂದರ್ಭವಿದು. ಆದರೀಗ ಮಳೆಯಾಗದ ಕಾರಣ ಸಾವೆ ಬೆಳೆ ಹಳದಿ ಬಣ್ಣಕ್ಕೆ ತಿರುಗಿ, ಒಣಗುವ ಹಂತದಲ್ಲಿದೆ. ರೈತರು ವರುಣನ ಕೃಪೆಗಾಗಿ ಆಕಾಶದತ್ತ ಚಿತ್ತ ನೆಟ್ಟಿದ್ದಾರೆ. ತಾಲ್ಲೂಕಿನಾದ್ಯಂತ ಬರದ ಕಾರ್ಮೋಡ ಆವರಿಸಿದೆ. ದಿನವೆಲ್ಲಾ ಮೋಡ ಮುಚ್ಚಿದ ವಾತಾವರಣವಿದ್ದರೂ ಮಳೆಯಾಗುತ್ತಿಲ್ಲ. ಸ್ವಲ್ಪ ಸಮಯ ತುಂತುರು ಮಳೆಯಾಗಿ ಮಾಯವಾಗುತ್ತಿದೆ. ಹೀಗಾದರೆ ಬೆಳೆ ಬೆಳೆಯಲು ಅನುಕೂಲವಾಗುವುದಿಲ್ಲ.
ʼಕಳೆದ ವರ್ಷ ಸಿರಿಧಾನ್ಯ ಉತ್ತಮ ಇಳುವರಿ ಬಂದಿತ್ತು. ಆದರೆ ಅದಕ್ಕೆ ತಕ್ಕಂತೆ ಬೆಲೆ ಸಿಗಲಿಲ್ಲ. ಈ ಬಾರಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಿ, ರೈತರಿಗೆ ಸಾವೆ ಬೆಳೆಯಲು ಪ್ರೋತ್ಸಾಹ ನೀಡಬೇಕು. ಅಲ್ಲದೇ ಸಾವೆಯನ್ನು ಪಡಿತರ ಜೊತೆಗೆ, ಶಾಲಾ ಮಕ್ಕಳಿಗೆ, ಅಂಗನವಾಡಿಗಳಲ್ಲಿ, ಸಮಾಜ ಕಲ್ಯಾಣ ಇಲಾಖೆ, ಮುರಾರ್ಜಿ ದೇಸಾಯಿ ವಸತಿಯುತ ಶಾಲೆಗಳಲ್ಲಿ, ಹಿಂದುಳಿದ ವರ್ಗದವರ ವಸತಿ ನಿಲಯಗಳಲ್ಲಿ ಆಹಾರಕ್ಕಾಗಿ ಸಿರಿಧಾನ್ಯ ಬಳಕೆ ಮಾಡುವಂತೆ ಉತ್ತೇಜನ ನೀಡಬೇಕು’ ಎಂದು ಬಾಗೂರಿನ ಪ್ರಗತಿಪರ ರೈತ ವೆಂಕಟೇಶ್ ಒತ್ತಾಯಿಸಿದರು.
‘ಕಳೆದ ಒಂದು ತಿಂಗಳಿನಿಂದಲೂ ಮಳೆಯಿಲ್ಲ. ಹೆಸರು ಕಾಳು ಕಟ್ಟುವ ಸಮಯದಲ್ಲಿ ಮಳೆಯಾಗದಿದ್ದರೆ ಉತ್ತಮ ಇಳುವರಿ ಬರುವುದಿಲ್ಲ. ಮತ್ತೊಂದೆಡೆ ಇರುವ 3 ಎಕರೆ ಭೂಮಿಯಲ್ಲಿ ಸಾವೆ ಬಿತ್ತನೆ ಮಾಡಿ ₹10,000 ರಿಂದ ₹15,000 ವ್ಯಯಿಸಲಾಗಿದೆ. ಸಾವೆ ಭೂಮಿಯಿಂದ ಮೇಲೆ ಬರುತ್ತಿದ್ದು, ಕೇವಲ 1.5 ಇಂದ 2 ಅಡಿ ಮಾತ್ರ ಬೆಳೆದಿದೆ. ಬೆಳೆ ಬೆಳೆಯುವುದು ಹಾಗೂ ಕಾಳುಕಟ್ಟುವ ಸಮಯದಲ್ಲೇ ಮಳೆ ಕೈಕೊಟ್ಟಿದೆ. ಕಳೆದ 4 ವರ್ಷಗಳಿಂದಲೂ ವಿಮೆ ಕಟ್ಟುತ್ತಿದ್ದರೂ ಸಹ ಯಾವುದೆ ಬೆಳೆವಿಮೆ ಬಂದಿಲ್ಲ. ಸರ್ಕಾರ ಸಿರಿಧಾನ್ಯ ಬೆಳೆಗಾರರ ಪರವಾಗಿ ಯೋಜನೆಗಳನ್ನು ರೂಪಿಸಿದರೆ ಅನುಕೂಲವಾಗುತ್ತದೆ‘ ಎನ್ನುತ್ತಾರೆ ಗುಡ್ಡದನೇರಲಕೆರೆ ನವೀನ್.
‘ಸಾವೆ ಸೇರಿದಂತೆ ಹಲವು ಬಿತ್ತನೆಯಾಗಿರುವ ಬೆಳೆಗಳಿಗೆ ಮಳೆಯ ಅವಶ್ಯಕತೆಯಿದೆ. ಬೆಳೆಗಳಿಗೆ ಅಂತರಬೇಸಾಯ ಹಾಗೂ ಮೇಲುಗೊಬ್ಬರವಿಲ್ಲದೆ ಬೆಳೆಗಳು ಕುಂಠಿತವಾಗಿವೆ. ಇನ್ನೂ ರಾಗಿ ಬಿತ್ತನೆಗಾಗಿ ರೈತರು ಮುಗಿಲ ನೋಡುತ್ತಿದ್ದಾರೆ. ಈಗಾಗಲೇ ಆರಿದ್ರಾ ಮಳೆ ಆರಂಭವಾಗಿದೆ. ಇಷ್ಟರಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿತ್ತು. ಮಳೆಯಾಗದ ಕಾರಣ ರೈತರು ಆತಂಕದಲ್ಲಿದ್ದಾರೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ತಿಳಿಸಿದರು.
ಕೇವಲ ಸಾವೆ ಮಾತ್ರವಲ್ಲ, ತಾಲ್ಲೂಕಿನಾದ್ಯಂತ ಈಗಾಗಲೇ ಬಿತ್ತನೆಯಾಗಿರುವ ಹೆಸರು, ಶೇಂಗಾ, ಕೊರಲೆ, ಸಜ್ಜೆ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಮಳೆ ಅತ್ಯಗತ್ಯವಾಗಿದೆ. ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಹಲವೆಡೆ ಕತ್ತೆ ಮದುವೆ, ಮಳೆ ಮಲ್ಲಪ್ಪ ಪೂಜೆ, ಗಂಗಾಪೂಜೆ, ದೇವರುಗಳಿಗೆ ಅಭಿಷೇಕ, ಪೂಜಾ ಕಾರ್ಯಗಳು ನಡೆಯುತ್ತಿವೆ.
‘ಈ ಬಾರಿ ಮುನ್ನ ಮುಂಗಾರು ಚೆನ್ನಾಗಿ ಆದ ಪರಿಣಾಮ ಸಾವೆ ಬಿತ್ತನೆಗೆ ಮುಂದಾಗಿದ್ದೆವು. ಹದ ಮಳೆಯಾದ ಪರಿಣಾಮ ಉತ್ತಮ ಇಳುವರಿ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದೆವು. ಸದ್ಯ ಸಾವೆ ಸಂಪೂರ್ಣವಾಗಿ ಬಾಡಿದೆ, ಮಳೆಯಾದರೂ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ. ನಿರೀಕ್ಷಿತ ಪ್ರಮಾಣದ ಇಳುವರಿ ದೊರೆಯುವುದಿಲ್ಲ’ ಎಂದು ರೈತ ಮಹಿಳೆ ಸಾವಿತ್ರಮ್ಮ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.