ಹೊಸದುರ್ಗದ ಎಪಿಎಂಸಿ ಆವರಣದಲ್ಲಿರುವ ಕುರಿ ಮಾರುಕಟ್ಟೆ
ಹೊಸದುರ್ಗ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕುರಿ ಮಾರುಕಟ್ಟೆ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಇದರಿಂದಾಗಿ ದೂರದ ಊರುಗಳಿಂದ ಬರುವ ಕುರಿ, ಮೇಕೆ ಸಾಕಣೆದಾರರು, ವರ್ತಕರು, ಖರೀದಿದಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಬುಧವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಇಲ್ಲಿ ಕುರಿ ಸಂತೆ ನಡೆಯುತ್ತದೆ. ಅಂದಾಜು 5,000ಕ್ಕೂ ಅಧಿಕ ಕುರಿಗಳು ಮಾರಾಟಕ್ಕೆ ಬರುತ್ತವೆ. ಚಿತ್ರದುರ್ಗ, ದಾವಣಗೆರೆ, ಅಜ್ಜಂಪುರ, ಹೊಳಲ್ಕೆರೆ, ಕಡೂರು, ತರೀಕೆರೆ, ಹಿರಿಯೂರು ಸೇರಿದಂತೆ ಹಲವು ಕಡೆಗಳಿಂದ ಖರೀದಿಗಾಗಿ ಸಾವಿರಾರು ಜನ ಬರುತ್ತಾರೆ.
ಹೊಸದುರ್ಗ ಹಾಗೂ ಸುತ್ತಮುತ್ತಲಿನ ಮಾಂಸಾಹಾರಿ ಖಾನಾವಳಿ ಮತ್ತು ಡಾಬಾ ಮಾಲೀಕರು ಮಾಂಸದ ಕುರಿ– ಮೇಕೆಗಳಿಗೆ ಇದೇ ಸಂತೆ ಅವಲಂಬಿಸಿದ್ದಾರೆ. ಮಾಂಸಾಹಾರಕ್ಕಾಗಿ ಬಲಿಷ್ಠ ಹಾಗೂ ಸದೃಢ ಕುರಿ– ಮೇಕೆಗಳು ಇಲ್ಲಿ ದೊರೆಯುತ್ತವೆ. ಕುರಿ ಸಾಕಾಣಿಕೆ ಮಾಡುವವರಿಗೆ ಇಲ್ಲಿ ಮರಿಗಳೂ ಸಿಗುತ್ತವೆ.
ಇಷ್ಟೆಲ್ಲಾ ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದ ಕಾರಣ ಜನ ಪರದಾಡುತ್ತಾರೆ. ಮಳೆಗಾಲದಲ್ಲಂತೂ ಇಲ್ಲಿನ ಸಮಸ್ಯೆಗಳು ದುಪ್ಪಟ್ಟಾಗುತ್ತವೆ. ಮರಿಗಳನ್ನು ಮಾರಾಟ ಮಾಡಲು ಸರಿಯಾದ ಸ್ಥಳಾವಕಾಶವಿಲ್ಲ. ಮಳೆಯಿಂದ ರಕ್ಷಣೆಗೆ ಒಂದು ಸೂರಿನ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಮಾರುಕಟ್ಟೆ ಸ್ಥಳ ಕೆಸರುಮಯವಾಗಿರುತ್ತದೆ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತು ರೈತರು ಹಾಗೂ ಕುರಿಗಾಯಿಗಳು ವ್ಯಾಪಾರ ಮಾಡುವಂತಹ ಸ್ಥಿತಿ ಇದೆ.
ವಾಹನ ನಿಲುಗಡೆ ಸ್ಥಳವಿಲ್ಲ: ಸರಿಯಾದ ಸ್ಥಳಾವಕಾಶವಿಲ್ಲದ್ದರಿಂದ ವಾಹನಗಳನ್ನು ಎಲೆಂದರಲ್ಲಿ ನಿಲ್ಲಿಸಲಾಗುತ್ತದೆ. ಒಮ್ಮೊಮ್ಮೆ ಮಾರುಕಟ್ಟೆ ಪ್ರಾಂಗಣದೊಳಗೇ ವಾಹನಗಳು ಬರುತ್ತವೆ. ಅವುಗಳ ಶಬ್ದಕ್ಕೆ ಹಿಂಡಿನಲ್ಲಿದ್ದ ಕುರಿಗಳು ಬೆದರಿ ಓಡುತ್ತವೆ. ಓಡುವ ಕುರಿಗಳನ್ನು ಹಿಡಿಯುವುದೇ ಒಂದು ಸಾಹಸ.
ಕುರಿ ಮಾರಾಟ ಮಾಡಲು ಬರುವವರಿಗೆ ಕುಳಿತುಕೊಳ್ಳಲು ಹಾಗೂ ನಿಲ್ಲಲು ವ್ಯವಸ್ಥೆಯಿಲ್ಲ. ಕುಡಿಯಲು ನೀರು ಸಿಗುವುದಿಲ್ಲ. ಶೌಚಾಲಯದ ಸೌಲಭ್ಯ ದೂರದ ಮಾತು. ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಸುತ್ತಲೂ ಗಿಡಗಂಟಿಗಳು ದಟ್ಟವಾಗಿ ಬೆಳೆದಿವೆ. ಯಾವುದೋ ಪಾಳುಬಿದ್ದ ಭೂಮಿಯಲ್ಲಿ ವ್ಯಾಪಾರ ಮಾಡಿದಂತಾಗುತ್ತಿದೆ. ಕಸದ ರಾಶಿಯೇ ಅಲ್ಲಿರುತ್ತದೆ.
ಮಾರುಕಟ್ಟೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ಎರಡು ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಇವು ಹೆಸರಿಗೆ ಮಾತ್ರ ನಿರ್ಮಾಣವಾಗಿದೆ. ಅಲ್ಲಿ ನೀರಿಗಿಂತ ಹೆಚ್ಚಾಗಿ ಕಸವೇ ತುಂಬಿದೆ. ಕುರಿಗಳು ಬೆಳಿಗ್ಗೆ ಮನೆಯಿಂದ ಹೊರಟಾಗ ನೀರು ಕುಡಿದರೆ, ಪುನಃ ಖರೀದಿದಾರ ಮನೆ ಸೇರಿದ ನಂತರವೇ ನೀರು ಕಾಣಬೇಕು. ಮೂಕ ಪ್ರಾಣಿಗಳಿಗೂ ಸೌಲಭ್ಯವಿಲ್ಲ.
‘ಖರೀದಿದಾರರು ಹಾಗೂ ಕುರಿಗಾಹಿಗಳು ಒಂದು ಕುರಿಗೆ ಇಂತಿಷ್ಟು ಹಣ ಎಂದು ಜಕಾತಿ (ತೆರಿಗೆ) ನೀಡುತ್ತಾರೆ. ಹಣ ಪಡೆಯಲು ಇರುವ ಉತ್ಸಾಹ ಸೌಲಭ್ಯ ನೀಡಲು ಇರುವುದಿಲ್ಲ. ಇಲ್ಲಿ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ‘ ಎಂದು ಕುರಿಗಾಹಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
‘ಕಳೆದ 4– 5 ವರ್ಷಗಳಿಂದ ಮಾರುಕಟ್ಟೆಗೆ ಬರುತ್ತಿದ್ದೇವೆ. ಇಲ್ಲಿ ಯಾವುದೇ ಸೌಕರ್ಯಗಳಿಲ್ಲ. ಕುರಿಗಳಿಗೂ ಕುಡಿಯಲು ನೀರಿನ ಸೌಲಭ್ಯವಿಲ್ಲ. ಎಪಿಎಂಸಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ವಿನೋದ್ ಶೀರನಕಟ್ಟೆ ಒತ್ತಾಯಿಸಿದರು.
‘ಕುರಿ ಸಂತೆ ನಿರ್ವಹಿಸಲು ಗೊರವಿನಕಲ್ಲು ಗ್ರಾಮದ ಪಕ್ಕದಲ್ಲಿ ಶಾಸಕರು 2 ಎಕರೆ ಭೂಮಿ ಹಂಚಿಕೆಗೆ ಸೂಚಿಸಿದ್ದಾರೆ. ನಿರ್ವಹಣೆಗೆ ನಿಗದಿಪಡಿಸಿದ ಸ್ಥಳದಲ್ಲಿಯೇ ಸಂತೆ ನಡೆದರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಮಿತಿ ಬದ್ಧವಾಗಿರುತ್ತದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಗೌತಮ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.