ADVERTISEMENT

ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ಬೇಕು ಹಲವು ಸೌಲಭ್ಯ

ಕುಡಿಯುವ ನೀರು, ವಿದ್ಯುತ್ ಕೊರತೆ l ಪಾರ್ಕಿಂಗ್ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:33 IST
Last Updated 21 ಏಪ್ರಿಲ್ 2022, 7:33 IST
ಹೊಸದುರ್ಗದ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರ ಬಳಿ ರೋಗಿಗಳು ನಿಂತಿರುವುದು (ಎಡಚಿತ್ರ). ಸಾರ್ವಜನಿಕ ಆಸ್ಪತ್ರೆ ಮುಂಭಾಗ ವಾಹನಗಳು ನಿಂತಿರುವುದು.
ಹೊಸದುರ್ಗದ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರ ಬಳಿ ರೋಗಿಗಳು ನಿಂತಿರುವುದು (ಎಡಚಿತ್ರ). ಸಾರ್ವಜನಿಕ ಆಸ್ಪತ್ರೆ ಮುಂಭಾಗ ವಾಹನಗಳು ನಿಂತಿರುವುದು.   

ಹೊಸದುರ್ಗ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹಲವು ಸೌಲಭ್ಯಗಳ ಕೊರತೆಯಿದ್ದು, ನಿತ್ಯ ಆಸ್ಪತ್ರೆಗೆ ಬರುವ ನೂರಾರು ರೋಗಿಗಳು ಪರದಾಡುವಂತಾಗಿದೆ.

‘ಆಸ್ಪತ್ರೆಗೆ ವಿದ್ಯುತ್ ಹಾಗೂ ನೀರಿನ ಸಮಸ್ಯೆಗಳು ಎದುರಾಗಿವೆ. ವಿದ್ಯುತ್ ಇಲ್ಲದ ಕಾರಣ ನೀರಿಗೆ ತೊಂದರೆಯಾಗುತ್ತದೆ. ವಿದ್ಯುತ್ ಬಂದರೆ ಯಾವುದೇ ಕೊರತೆಯಿಲ್ಲ’ ಎಂಬುದು ವೈದ್ಯರ ಉತ್ತರ.

‘ವಿದ್ಯುತ್ ಇಲ್ಲದೇ ಇರುವುದರಿಂದ ಸೋಮವಾರ ಬೆಳಿಗ್ಗೆಯಿಂದಲೇ ಯಾವ ರೋಗಿಗಳಿಗೂ ಎಕ್ಸ್‌ರೇ ಮಾಡಿಲ್ಲ. ಆಸ್ಪತ್ರೆಗೆ 250 ಕೆ.ವಿ ಜನರೇಟರ್ ನೀಡಿ ಮೂರು ದಿನಗಳಾದರೂ ಅದನ್ನು ಫಿಕ್ಸಿಂಗ್ ಮಾಡಿಲ್ಲ. ಯಾವಾಗ ಆಗುತ್ತದೆ ಎಂಬುದು ಸಿಬ್ಬಂದಿಗೂ ಗೊತ್ತಿಲ್ಲ. ಬೇರೆ ಕಡೆಗೆ ಎಕ್ಸ್‌ರೇ ಮಾಡಿಸಲು ಹೋಗೋಣ ಎಂದರೆ ಆರ್ಥಿಕ ಹೊಡೆತ’ ಎನ್ನುತ್ತಾರೆ ರೋಗಿ ಸಿದ್ದಪ್ಪ.

ADVERTISEMENT

ಸಿಬ್ಬಂದಿ ಕೊರತೆ: ‘ಆಸ್ಪತ್ರೆಯಲ್ಲಿ ಪ್ರಸ್ತುತ 28 ಜನ ವೈದ್ಯರು ಇದ್ದು, ಅವರಲ್ಲಿ 19 ಮಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. 4 ಜನ ನರ್ಸ್, ಇಬ್ಬರು ವಾಚ್‌ಮನ್‌, ಒಬ್ಬರು ನೇತ್ರ ತಜ್ಞರು. ಇಬ್ಬರು ಫಾರ್ಮಾಸಿಸ್ಟ್‌ ಹಾಗೂ ಒಬ್ಬರು ಎಕ್ಸ್‌ರೇ ತಂತ್ರಜ್ಞರ ಅವಶ್ಯಕತೆ ಇದೆ’ ಎನ್ನುತ್ತಾರೆ ಡಾ. ಸಂಜಯ್.

ಶೌಚಾಲಯ ಬಾಗಿಲಿಗೆ ಬೋಲ್ಟ್ ಇಲ್ಲ: ಹೆರಿಗೆ ವಾರ್ಡ್ ಮುಂಭಾಗದಲ್ಲಿ ಮಹಿಳೆಯರಿಗೆ 2 ಶೌಚಾಲಯಗಳಿದ್ದು, ಅಲ್ಲಿ ನೀರಿನ ಸಮಸ್ಯೆ ಇದೆ. ಸಾಲದ್ದಕ್ಕೆ ಬಾಗಿಲುಗಳು ಬಿಗಿಯಾಗಿಲ್ಲ. ಬಾಗಿಲಿಗೆ ಬೋಲ್ಟ್ ವ್ಯವಸ್ಥೆಯೂ ಇಲ್ಲ.

ಸಂಜೆ 4.30ರ ಬಳಿಕ ಎಕ್ಸ್‌ರೇ ಇಲ್ಲ: ಆಸ್ಪತ್ರೆಯಲ್ಲಿ ಸುಸಜ್ಜಿತ ಕೊಠಡಿಯಲ್ಲಿ ಎಕ್ಸ್‌ರೇ ಇದೆ. ಆದರೆ ಸಂಜೆ 4.30ರ ನಂತರ ಯಾರೂ ಇರುವುದಿಲ್ಲ. ಯಾರಾದರೂ ಬಂದರೆ ಬೇರೆ ಆಸ್ಪತ್ರೆಗೆ ಬರೆದು ಕೊಡಲಾಗುತ್ತದೆ.

‘ತಾಲ್ಲೂಕು ಆಸ್ಪತ್ರೆ ಕೇಂದ್ರಗಳಲ್ಲಿ ಸಂಹೆ 4.30ರವರೆಗೆ ಮಾತ್ರ ಎಕ್ಸ್‌ರೇ ಕೇಂದ್ರ ತೆರೆದಿರುತ್ತದೆ ಎಂಬುದು ಆಡಳಿತಾಧಿಕಾರಿ ಡಾ. ಸಂಜಯ್ ಅವರ ಉತ್ತರ.

ವೈದ್ಯರ ಬಳಿ ರೋಗಿಗಳ ದಂಡು: ‘ಸ್ತ್ರೀರೋಗ ತಜ್ಞರು ಸೇರಿ ಹಲವೆಡೆ ವೈದ್ಯರ ಬಳಿ ಚಿಕಿತ್ಸೆಗಾಗಿ ರೋಗಿಗಳ ನೂಕು ನುಗ್ಗಲು ಇರುತ್ತದೆ. ಸಮರ್ಪಕ ವ್ಯವಸ್ಥೆಯಿಲ್ಲ. ಬಾಗಿಲ ಬಳಿ ಇರುವ ಡಿ.ಗ್ರೂಪ್ ನೌಕರರು ಒಬ್ಬೊಬ್ಬ ರೋಗಿಗಳನ್ನು ಕಳುಹಿಸುತ್ತಾರೆ. ಗರ್ಭಿಣಿಯರು ನಿಲ್ಲುವ ಶಕ್ತಿ ಕಡಿಮೆ ಇರುತ್ತದೆ. ಇಲ್ಲಿ ತಳ್ಳಾಟ, ನೂಕಾಟ ಜೋರಾಗಿರುತ್ತದೆ. ಈ ಕುರಿತು ಡಾ. ಕವಿತಾ ಅವರನ್ನು ವಿಚಾರಿಸಿದರೆ ಅವರು ಪ್ರತಿಕ್ರಿಯಿಸುತ್ತಿಲ್ಲ’
ಎಂದರು.

ಪಾರ್ಕಿಂಗ್ ಅವ್ಯವಸ್ಥೆ: ರೋಗಿಗಳ ಜೊತೆ ಬರುವ ಜನರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಅದಕ್ಕೊಂದು ವ್ಯವಸ್ಥೆಯಿಲ್ಲ. ಆಸ್ಪತ್ರೆಗೆ ಒಳಹೋಗುವ ಜಾಗದಲ್ಲೇ ಬೈಕ್‌ಗಳನ್ನು ನಿಲ್ಲಿಸುತ್ತಾರೆ. ವಾಹನಗಳ ಮಧ್ಯೆ ಜಾಗ ಮಾಡಿಕೊಂಡು ಒಳಹೋಗಲು ಹರಸಾಹಸ ಪಡೆಬೇಕಾಗುತ್ತದೆ. ಒಂದು ಪಾರ್ಕಿಂಗ್ ವ್ಯವಸ್ಥೆ ಮಾಡಿ, ಎಲ್ಲಾ ವಾಹನಗಳನ್ನು ಅಲ್ಲೇ ನಿಯಮಾನುಸಾರ ನಿಲ್ಲಿಸುವ ಕಾರ್ಯವಾದರೆ ಸಾರ್ವಜನಿಕರಿಗೆ ಒಳಿತಾದೀತು.

ಮಂದಗತಿಯಲ್ಲಿ ಆಮ್ಲಜನಕ ಘಟಕ: ‘ಆಮ್ಲಜನಕ ಘಟಕದ ಕೆಲಸ ಶುರುವಾಗಿ 5 ತಿಂಗಳಾದರೂ ಶೀಘ್ರವಾಗಿ ಸಾಗುತ್ತಿಲ್ಲ. ಇನ್ನೂ 15 ದಿನದೊಳಗೆ ಮುಗಿಸುವುದಾಗಿ ಹೇಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಆಮ್ಲಜನಕದ ಸೌಲಭ್ಯವಿದೆ’ ಎನ್ನುತ್ತಾರೆ ಹೊಸದುರ್ಗ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸಂಜಯ್.

ಇವೆಲ್ಲದರ ನಡುವೆ ಇಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ವಾರ್ಡ್‌ಗಳು ಚೆನ್ನಾಗಿವೆ ಎಂಬುದು ಖುಷಿಯ ಸಂಗತಿ.

....

ಪ್ರತಿ ಸೋಮವಾರ 1000ಕ್ಕೂ ಅಧಿಕ ರೋಗಿಗಳು ಬರುತ್ತಾರೆ. ಮಾನವ ಸಂಪನ್ಮೂಲದ ಅಗತ್ಯವಿದೆ. ಜೊತೆಗೆ ವೈದ್ಯಕೀಯ ಉಪಕರಣಗಳನ್ನು ನೀಡುವಂತೆ ಕೋರಿ ಡಿಎಚ್ಒಗೆ ಮನವಿ ಸಲ್ಲಿಸಲಾಗಿದೆ.

-ಡಾ.ಸಂಜಯ್, ಆಡಳಿತ ವೈದ್ಯಾಧಿಕಾರಿ

....

ಪ್ರತಿ ಸೋಮವಾರ ಸಂತೆ ನಡೆಯುವ ಕಾರಣ ಹಳ್ಳಿಯಿಂದ ಆಸ್ಪತ್ರೆಗೆ ಬಹಳ ಜನ ಬರುತ್ತಾರೆ. ರೋಗಿಯ ಹೆಸರಲ್ಲಿ ಚೀಟಿ ಬರೆದು, ಅದಕ್ಕೊಂದು ನಂಬರ್ ನೀಡಿ, ಆ ನಂಬರ್ ಅನುಗುಣವಾಗಿ ಚಿಕಿತ್ಸೆ ನೀಡಿದರೆ ಈ ರೀತಿಯ ನೂಕು ನುಗ್ಗಲು ಕಡಿಮೆಯಾಗುತ್ತದೆ.

-ರಾಜು ವಿ., ಸಾಮಾಜಿಕ ಹೋರಾಟಗಾರ

.....

ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಕ್ಸ್‌ರೇ ಸಮಯವನ್ನು ಸಂಜೆ 4.30ಕ್ಕೆ ನಿಗದಿಯಾಗಿದೆ. ತುರ್ತು ಸಂದರ್ಭದಲ್ಲಿ ಬಂದು ಎಕ್ಸ್‌ರೇ ಮಾಡಬಹುದು. ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಶೀಘ್ರ ಕಲ್ಪಿಸಲಾಗುವುದು

-ಡಾ.ರಂಗನಾಥ್, ಡಿಎಚ್ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.