ADVERTISEMENT

ಖಾಸಗಿ ಆಸ್ಪತ್ರೆ ಬಳಕೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 15:06 IST
Last Updated 29 ಮಾರ್ಚ್ 2020, 15:06 IST

ಚಿತ್ರದುರ್ಗ: ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ನಗರದಲ್ಲಿನ ಬಹುತೇಕ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಕೊರೊನಾ ಸೋಂಕಿತ ಅನುಮಾನಾಸ್ಪದ ವ್ಯಕ್ತಿಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲು ಈ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕೂ ಮುನ್ನ ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಕಲಾ ಕಾಲೇಜನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿ ತೀರ್ಮಾನಿಸಿದ್ದರು. ಶೌಚಾಲಯದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಹಾಗೂ ಮುರುಘ ರಾಜೇಂದ್ರ ಕ್ರೀಡಾಂಗಣ ತರಕಾರಿ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಿರುವುದರಿಂದ ನಿರ್ಧಾರ ಬದಲಿಸಲಾಗಿದೆ.

ಕಾಲೇಜುಗಳಲ್ಲಿ ಪ್ರತ್ಯೇಕ ವಾರ್ಡ್ ನಿರ್ಮಿಸಿದರೆ ಶೌಚಾಲಯಗಳು ಸಾಕಾಗುವುದಿಲ್ಲ. ಮಂಚ, ಹಾಸಿಗೆ, ವೆಂಟಿಲೇಟರ್, ಕೈಶುಚಿತ್ವಕ್ಕೆ ಸಿಂಕ್‌ಗಳು ಸೇರಿ ಅನೇಕ ವೈದ್ಯಕೀಯ ಉಪಕರಣ ಹಾಗೂ ಸಲಕರಣೆಗಳು ಬೇಕಾಗುತ್ತವೆ. ಕ್ವಾರಂಟೈನ್ ಮತ್ತು ಚಿಕಿತ್ಸೆ‌ಗೆ ಒಳಗಾಗುವವರು ಹಾಗೂ ವೈದ್ಯರಿಗೆ ಮುಂದೆ‌ ಎದುರಾಗಬಹುದಾದ ಸಮಸ್ಯೆಗಳ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದೆ.

ADVERTISEMENT

ಜಿಲ್ಲೆಯಲ್ಲಿ 12 ಫೀವರ್ ಕ್ಲಿನಿಕ್ ತೆರೆಯಲಾಗಿದೆ. ಜ್ವರಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲು ಪಾಳಿ ವ್ಯವಸ್ಥೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕರನ್ನು ನೇಮಕ‌ ಮಾಡಲಾಗಿದೆ. ರೋಗಿಗಳ‌ ಸಂಖ್ಯೆ ಅಧಿಕವಾಗಿ ತೀವ್ರ ಜ್ವರದಿಂದ ಬಳಲುವವರೂ ಹೆಚ್ಚಾದಲ್ಲಿ ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗುತ್ತದೆ. ಇಂತಹ ವಾರ್ಡ್‌ಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.