
ಹೊಸದುರ್ಗ: ಸರ್ಕಾರಕ್ಕೆ ರಂಗಭೂಮಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಮಾಡುವ ಆಲೋಚನೆ ಬಂದರೆ ಆ ಕಾರ್ಯ ಸಾಣೇಹಳ್ಳಿಯಲ್ಲಿ ಆಗಬೇಕು. ರಂಗ ಶಿಕ್ಷಕರನ್ನು ಶಿವಸಂಚಾರ ತಂಡವರನ್ನು ಆಯ್ಕೆ ಮಾಡಬಹುದು. ಎಂದು ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಲವು ಮಠಗಳ ಜಾತ್ರೆ ಉತ್ಸವ ಕೇಳುತ್ತಿದ್ದೆವು. ಆದರೆ, ನಾಟಕಗಳ ಮೂಲಕ ಮಠದ ಉತ್ಸವ ನಡೆಯುತ್ತಿರುವುದು ಸಾಣೇಹಳ್ಳಿಯಲ್ಲಿ ಮಾತ್ರ. ನಾಡಿನ ಏಕೈಕ ದಿಟ್ಟ ಜಂಗಮ ಪಂಡಿತಾರಾಧ್ಯ ಶ್ರೀಗಳು. ನಿಲುವು ತಾತ್ವಿಕವಾಗಿ ಸ್ಪಷ್ಟವಾಗಿರಬೇಕು. ಗುರುಗಳು ತಯಾರಿಸಿರುವ ಶಿಷ್ಯರು ನಾಡನ್ನೇ ಮುನ್ನಡೆಸುವಂತಿರಬೇಕು. ಆ ಸಾಮರ್ಥ್ಯ ಗುರುಗಳಿಗೆ ಇರಬೇಕು ಎಂದು ಅಭಿಪ್ರಾಯಪಟ್ಟರು.
ತಮಗೆ ಬೇಕಾದಂತೆ ವಚನಗಳ ಅರ್ಥ ಕೊಡಬೇಡಿ. ವಚನಗಳ ಹಾದಿ ತಪ್ಪಿಸಬಾರದು, ನಮಗಿಷ್ಟ ಬಂದಂತೆ ಬಳಸಬಾರದು. ವಚನಗಳನ್ನು ಶರಣರ ಆಶಯದಂತೆ ಅರ್ಥೈಸಿಕೊಳ್ಳಬೇಕು. ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿ ಮಾಡಬೇಕು. ಸರ್ಕಾರ ಜನಪರವಾಗಿ ಬೇಕು. ರೈತ ಬದುಕಿದರೆ ನಾವೆಲ್ಲಾ ಬದುಕಿದಂತೆ. ರೈತರನ್ನು ಉಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಮೊಬೈಲ್, ಫೇಸ್ ಬುಕ್ ಬಳಕೆ ಮಾಡಿಕೊಂಡು ನಕಾರಾತ್ಮಕ ಸಾಹಿತ್ಯ ವೈಭವವಾಗುತ್ತಿದೆ. ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಪದಗಳ ಬಳಕೆಯಾಗುತ್ತಿದೆ. ಮಾಧ್ಯಮಗಳು ಬಿಂಬಿಸುವ ಮುನ್ನ ಪರಿಶೀಲನೆ ನಡೆಸಬೇಕು. ಆತ್ಮ ವೀಕ್ಷಣೆ ಮಾಡಿಕೊಳ್ಳಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ದೇವರು, ಧರ್ಮದ ಹೆಸರಿನಲ್ಲಿ ಹೋಮ–ಹವನ ನೆಪದಲ್ಲಿ ಬಲಿ ಕೊಡುವ ಸಂಪ್ರದಾಯ ಇಂದಿಗೂ ಇದೆ. ಇನ್ನೊಂದು ಧರ್ಮದ ಬಗ್ಗೆ ನಾವು ಟೀಕೆ ಮಾಡಲ್ಲ. ನಮ್ಮ ಧರ್ಮದ ಬಗ್ಗೆ ಹೇಳುತ್ತಿದ್ದೇವೆ. ಯೋಗ್ಯ ವ್ಯಕ್ತಿ ಬಳಸಬಾರದಂತಹ ಪದ ಬಳಸಿದರೆ, ಅವರು ಯೋಗ್ಯ ಆಗಲಾರರು. ಚುನಾವಣೆ ಬಂದಾಗ ಮಠಗಳು ಬೇಕು, ಮಠಗಳ ಭಕ್ತರು ಬೇಕು. ಆದರೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಸ್ವಾಮಿಗಳನ್ನು ತುಚ್ಛವಾಗಿ ಬೈದವರ ವಿರುದ್ಧ ಯಾರೂ ಪ್ರತಿಭಟಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರದ ಚಿಂತಕ ಜೆ. ಎಸ್ ಪಾಟೀಲ್ ಅವರು ಲಿಂಗಾಯತ ಧರ್ಮ ಕುರಿತು ಉಪನ್ಯಾಸ ನೀಡುತ್ತಾ, 12 ಶತಮಾನದಲ್ಲಿ ಸಂಘರ್ಷದಿಂದ ಹುಟ್ಟಿದ್ದು, ಸಂಘರ್ಷದಲ್ಲೇ ಬದುಕುತ್ತಿರುವುದು ಲಿಂಗಾಯತ ಧರ್ಮ. ಲಿಂಗಾಯತ ಧರ್ಮದ ತತ್ವಗಳನ್ನು ತಿರುಚುವ, ಇನ್ನೊಂದು ಧರ್ಮಕ್ಕೆ ವಿಲೀನಗೊಳಿಸುವ ಕೆಲಸ ನಡೆಯುತ್ತಿದೆ. ದೇವಾಲಯಗಳಿಗೆ ಹೋಗಬೇಡಿ ಎಂದಾಗ ನೋವಾಗುತ್ತದೆ. ಈಗ ದೇವಾಲಯಗಳು ದಂಧೆಯ ತಾಣಗಳಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಚಿತ್ರದುರ್ಗ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕರುಗಳಾದ ಬೆಳ್ಳಿ ಪ್ರಕಾಶ್, ವಡ್ನಾಳ್ ರಾಜಣ್ಣ, ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನೆ, ವರ್ತಕ ಎಚ್. ಓಂಕಾರಪ್ಪ, ಅಣ್ಣಿಗೆರೆ ಶಿಕ್ಷಕ ಕೆ. ವಿರೂಪಾಕ್ಷಪ್ಪ ಸೇರಿದಂತೆ ಶ್ರೀಮಠದ ಸಿಬ್ಬಂದಿ ಹಾಗೂ ಭಕ್ತರಿದ್ದರು.
ಶಾಶ್ವತ ನಿಧಿಗೆ ₹ ₹ 3 ಕೋಟಿ ಸಂಗ್ರಹ ಗುರಿ
ಶಿವ ಸಂಚಾರಕ್ಕೆ ಶಾಶ್ವತ ನಿಧಿಯಾಗಿ ಮುಂದಿನ ನಾಟಕೋತ್ಸವದ ಸಮಯಕ್ಕೆ ₹ 3 ಕೋಟಿ ಸಂಗ್ರಹಿಸುವ ಗುರಿಯಿದೆ. ಇದಕ್ಕಾಗಿ ಭಕ್ತರು ಕಾಣಿಕೆ ನೀಡಬೇಕು. ಶಿವ ಸಂಚಾರದ ಕಲಾವಿದರಿಗೆ ಪ್ರತಿ ತಿಂಗಳು ₹ 10 ಸಾವಿರ ನೀಡುತ್ತಿದ್ದೇವೆ. ಇದನ್ನು ಹೆಚ್ಚಿಸಲು ಶಾಶ್ವತ ನಿಧಿ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.