ADVERTISEMENT

ನಾಯಕನಹಟ್ಟಿ | ಬಾಲ್ಯವಿವಾಹದಲ್ಲಿ ಭಾಗಿಯಾದರೆ ಕಠಿಣ ಶಿಕ್ಷೆ ಖಚಿತ

ವಿದ್ಯಾವಿಕಾಸ ಶಾಲೆಯಲ್ಲಿ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:21 IST
Last Updated 19 ಜುಲೈ 2025, 7:21 IST
ನಾಯಕನಹಟ್ಟಿ ಪಟ್ಟಣದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ನಡೆದ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಪಾಂಡುರಂಗ ಮಾತನಾಡಿದರು.
ನಾಯಕನಹಟ್ಟಿ ಪಟ್ಟಣದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ನಡೆದ ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಪಾಂಡುರಂಗ ಮಾತನಾಡಿದರು.   

ನಾಯಕನಹಟ್ಟಿ: ‘ಬಾಲ್ಯವಿವಾಹ ನಿಷೇಧ ಕಾಯ್ದೆಯು ಬಾಲ್ಯವಿವಾಹ ನಡೆಸುವ ಪೋಷಕರ ನೆತ್ತಿಯ ಮೇಲೆ ಸದಾ ತೂಗುವ ಕತ್ತಿ ಇದ್ದಂತೆ. ಪೋಷಕರು ಬಾಲ್ಯವಿವಾಹ ನಡೆಸಲು ಮುಂದಾಗಬಾರದು’ ಎಂದು ಪಿಎಸ್‌ಐ ಪಾಂಡುರಂಗ ಹೇಳಿದರು.

ಪಟ್ಟಣದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಆಶ್ರಿತ ಸಂಸ್ಥೆಯ ಆಶ್ರಯದಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ 18 ವರ್ಷಗಳ ಕನಿಷ್ಠ ವಯೋಮಿತಿಯನ್ನು ಸರ್ಕಾರ ನಿಗದಿಪಡಿಸಿದೆ. ಇವರಲ್ಲಿ ಕನಿಷ್ಠ ಒಬ್ಬರಿಗೆ ವಯೋಮಿತಿ ಕಡಿಮೆ ಇದ್ದರೂ ಅದನ್ನು ಬಾಲ್ಯವಿಹಾಹ ಎಂದು ಘೋಷಿಸಲಾಗುವುದು. ಇಂತಹ ದಂಪತಿಗೆ ಮಕ್ಕಳು ಜನಿಸಿದರೆ ಇದನ್ನು ಸಂಬಂಧಿಸಿದ ಆಸ್ಪತ್ರೆಗಳು ಪೊಲೀಸ್ ಠಾಣೆಗೆ ವರದಿ ನೀಡುತ್ತವೆ. ಇದರ ಆಧಾರದ ಮೇಲೆ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸುತ್ತದೆ. ನಂತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಮದುವೆಯಾದ ಇಬ್ಬರ ಜೊತೆಗೆ ಅವರ ಪೋಷಕರು ಜೈಲು ಸೇರುತ್ತಾರೆ’ ಎಂದು ಹೇಳಿದರು.

ADVERTISEMENT

‘ಈ ಘಟನೆಯಲ್ಲಿ ದಂಪತಿಗೆ ಜನಿಸಿದ ಮಕ್ಕಳು ಅನಾಥರಾಗುವ ಸಾಧ್ಯತೆ ಇದೆ. ಮಹಿಳೆ ಸಹಾಯವಾಣಿ 181 ಮತ್ತು ಮಕ್ಕಳ ಸಹಾಯವಾಣಿ 1098 ಅನ್ನು ಅಗತ್ಯವಿದ್ದಾಗ ಬಳಸಿಕೊಳ್ಳಬೇಕು. ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಸಮೀಪದ ಅಂಗನವಾಡಿ, ಶಾಲಾ ಮುಖ್ಯಸ್ಥರು, ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬಹುದು. ಇಂತಹ ಮಾಹಿತಿದಾರರ ಹೆಸರನ್ನು ಗೋಪ್ಯವಾಗಿಡಲಾಗುವುದು. ಅಂತಹವರನ್ನು ಯಾವುದೇ ವಿಚಾರಣೆಗೆ ಒಳಪಡಿಸುವುದಿಲ್ಲ’ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಬಿ.ವಿನುತಾ, ಸುನಿತಾ ಮುದಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಚಾಲಕ ವಿನಯ್, ಎಎಸ್‌ಐ ಧನಂಜಯ್, ಆರೋಗ್ಯ ಇಲಾಖೆ ಸಿಬ್ಬಂದಿ ಎಂ. ಶೇಷಾದ್ರಿನಾಯಕ, ಸಖಿ ಸಂಘಟನೆಯ ಶ್ರುತಿ, ಅಂಗನವಾಡಿ ಮೇಲ್ವಿಚಾರಕಿ ಸೌಮ್ಯಾ, ಮುಖ್ಯಶಿಕ್ಷಕಿಯರಾದ ಎ.ಉಮಾ, ಟಿ.ರೂಪಾ, ಶಿಕ್ಷಕರಾದ ಎಸ್.ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.