ADVERTISEMENT

ಮೊಳಕಾಲ್ಮುರಿನಿಂದಲೇ ಮತ್ತೆ ಸ್ಪರ್ಧೆ: ಸಚಿವ ಬಿ. ಶ್ರೀರಾಮುಲು

‘ನಮ್ಮ ಸಚಿವರೊಂದಿಗೆ ಔತಣಕೂಟ’ದಲ್ಲಿ ಸಚಿವ ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 4:31 IST
Last Updated 14 ನವೆಂಬರ್ 2022, 4:31 IST
ಮೊಳಕಾಲ್ಮುರು ತಾಲ್ಲೂಕಿನ ನುಂಕಪ್ಪನ ಬೆಟ್ಟದಲ್ಲಿ ಭಾನುವಾರ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ‘ನಮ್ಮ ಸಚಿವರೊಂದಿಗೆ ಔತಣಕೂಟ’ದಲ್ಲಿ ಸಚಿವ ಬಿ. ಶ್ರೀರಾಮುಲು ಊಟ ಬಡಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ನುಂಕಪ್ಪನ ಬೆಟ್ಟದಲ್ಲಿ ಭಾನುವಾರ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ‘ನಮ್ಮ ಸಚಿವರೊಂದಿಗೆ ಔತಣಕೂಟ’ದಲ್ಲಿ ಸಚಿವ ಬಿ. ಶ್ರೀರಾಮುಲು ಊಟ ಬಡಿಸಿದರು.   

ಮೊಳಕಾಲ್ಮುರು: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ಸಚಿವ ಬಿ. ಶ್ರೀರಾಮುಲು ಭಾನುವಾರ ಘೋಷಣೆ ಮಾಡಿದರು.

ಇಲ್ಲಿನ ನುಂಕಪ್ಪನ ಬೆಟ್ಟದಲ್ಲಿ ಮಂಡಲ ಬಿಜೆಪಿಭಾನುವಾರ ಹಮ್ಮಿಕೊಂಡಿದ್ದ ‘ನಮ್ಮ ಸಚಿವರೊಂದಿಗೆ ಔತಣಕೂಟ’ ಉದ್ಘಾಟಿಸಿ ಮಾತನಾಡಿದರು.

‘ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಗಳನ್ನು ಕೈಗೊಂಡಿದ್ದು, ಕೆಲ ಕಾರ್ಯಗಳು ಬಾಕಿ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಲು ಇನ್ನೊಂದು ಅವಕಾಶ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

‘ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬೇಡಿಕೆ 40 ವರ್ಷಗಳದ್ದಾಗಿತ್ತು. ಬೇಡಿಕೆ ಈಡೇರಿಕೆಗಾಗಿ ಹಲವರು ಶ್ರಮಿಸಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿತು. ಇದರಿಂದ ಪರಿಶಿಷ್ಟ ಜಾತಿ, ಪಂಗಡಗಳಿಗೆ ರಾಜಕೀಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶ ಸಿಗಲಿದೆ. ಇದರ ಫಲವನ್ನು ಮುಂದಿನ ಪೀಳಿಗೆ ನೆನೆಯಲಿದೆ’ ಎಂದರು.

ಸಾಧನೆ ಪೂರ್ಣಗೊಳಿಸಿದ್ದಕ್ಕೆ ಗೌರವ ಸಲ್ಲಿಸಲು ವಿರಾಟ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. 8 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಮೊಳಕಾಲ್ಮುರು ಕ್ಷೇತ್ರದಿಂದ 25 ಸಾವಿರ ಜನ ತೆರಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ತಿಳಿಸಿದರು.

ಎಸ್‌ಟಿ ಮೋರ್ಚಾ ಮಂಡಲಾಧ್ಯಕ್ಷ ಜೀರಹಳ್ಳಿ ತಿಪ್ಪೇಸ್ವಾಮಿ, ಆಪ್ತ ಸಹಾಯಕ ಮಂಜುಸ್ವಾಮಿ, ರಾಂಪುರ ಪರಮೇಶ್ವರಪ್ಪ ಮಾತನಾಡಿದರು. ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಟಿ. ರವಿಕುಮಾರ್, ಪಿ. ಲಕ್ಷ್ಮಣ್, ಮಂಜಣ್ಣ, ಮುಖಂಡರಾದ ಆರ್. ರಾಮರೆಡ್ಡಿ, ಜಿಂಕಲು ಬಸವರಾಜ್, ಹಾನಗಲ್ ತಿಪ್ಪಯ್ಯ, ಪಾಪೇಶ್ ನಾಯಕ, ಈರಕ್ಕ, ಜಿ. ಮೂರ್ತಿ, ಚಂದ್ರಶೇಖರ ಗೌಡ ಇದ್ದರು.

ರಾಜಕೀಯ ಲೆಕ್ಕಾಚಾರ

ಕ್ಷೇತ್ರದಲ್ಲಿ ತನ್ನ ವರ್ಚಸ್ಸು ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಶ್ರೀರಾಮುಲು ಸಂವಾದ ಹಮ್ಮಿಕೊಂಡಿದ್ದಾರೆ. ವಿರಾಟ್ ಸಮಾವೇಶ, ಮೀಸಲಾತಿ ಹೆಚ್ಚಳ ಅಂಶ ಮುಂದಿಟ್ಟು ಮತ್ತೊಮ್ಮೆ ಇಲ್ಲಿಂದ ಸ್ಪರ್ಧೆ ಮಾಡಲು ಮುಂದಾದರೆ ಯಾವ ಅಭಿಪ್ರಾಯ ವ್ಯಕ್ತವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಕಾರ್ಯಕ್ರಮ ವೇದಿಕೆಯಾಯಿತು ಎಂದು ಕೆಲವರು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ 2023ಕ್ಕೆ ಮತ್ತೆ ಶ್ರೀರಾಮುಲು ಎಂಬ ಘೋಷಣೆಯನ್ನು ಪದೇ, ಪದೇ ಕೂಗಿಸಲಾಯಿತು. ಕೊನೆಯಲ್ಲಿ ಶ್ರೀ ರಾಮುಲು ಇಲ್ಲಿಂದ ಮತ್ತೆ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದರು.

ಸಂವಾದದಲ್ಲಿ 2 ಸಾವಿರ ಜನ ಭಾಗವಹಿಸಿದ್ದರು. ಬಾಡೂಟಕ್ಕಾಗಿ 20 ಕುರಿ, 150 ಕೆ.ಜಿ. ಚಿಕನ್ ವ್ಯವಸ್ಥೆ ಮಾಡಲಾಗಿತ್ತು ಎಂದು ಮುಖಂಡರೊಬ್ಬರು ತಿಳಿಸಿದರು. 1 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ 3.30ಕ್ಕೆ ಆರಂಭವಾಯಿತು. ಸಭೆಯ ನಂತರ 4 ಗಂಟೆಗೆ ಊಟ ನೀಡಲು ಆರಂಭಿಸಲಾಯಿತು. ಶ್ರೀರಾಮುಲು ಅವರು ಸ್ವತ: ಹಲವರಿಗೆ ಊಟ ಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.