ADVERTISEMENT

ಚಳ್ಳಕೆರೆ: ಅಸಮರ್ಪಕ ನಿರ್ವಹಣೆ- ಹಾಳುಬಿದ್ದ ನೀರಿನ ಘಟಕ

ಚಳ್ಳಕೆರೆ ತಾಲ್ಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಾಳಾದ ಘಟಕಗಳು

ಶಿವಗಂಗಾ ಚಿತ್ತಯ್ಯ
Published 6 ಫೆಬ್ರುವರಿ 2022, 19:30 IST
Last Updated 6 ಫೆಬ್ರುವರಿ 2022, 19:30 IST
ಚಳ್ಳಕೆರೆ ತಾಲ್ಲೂಕಿನ ಮಲ್ಲೂರಹಟ್ಟಿ ಗ್ರಾಮದಲ್ಲಿ ಕೆಟ್ಟಿರುವ ಶುದ್ಧ ನೀರಿನ ಘಟಕ
ಚಳ್ಳಕೆರೆ ತಾಲ್ಲೂಕಿನ ಮಲ್ಲೂರಹಟ್ಟಿ ಗ್ರಾಮದಲ್ಲಿ ಕೆಟ್ಟಿರುವ ಶುದ್ಧ ನೀರಿನ ಘಟಕ   

ಚಳ್ಳಕೆರೆ: ಜನರಿಗೆ ಕುಡಿಯುವ ಶುದ್ಧ ನೀರು ಪೂರೈಕೆ ಮಾಡಲು ನಿರ್ಮಿಸಿದ್ದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಹಾಳುಬಿದ್ದಿವೆ. ತಾಲ್ಲೂಕಿನ 30ಕ್ಕೂ ಹೆಚ್ಚು ಗ್ರಾಮಗಳು ಹಾಗೂ ನಗರ ಪ್ರದೇಶದಲ್ಲಿನ ಘಟಕಗಳು ಕೆಟ್ಟು ಹೋಗಿವೆ.

ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯ ಮನಗಂಡು ಹಲವೆಡೆ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗುವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ನಗರ ಪ್ರದೇಶದಇಂದಿರಾ ತರಕಾರಿ ಮಾರುಕಟ್ಟೆ ಹಿಂಭಾಗ, ಸರ್ಕಾರಿ ಬಸ್‍ನಿಲ್ದಾಣ, ಅಂಬೇಡ್ಕರ್ ನಗರ, ಪಾವಗಡ ರಸ್ತೆ ರೈಲ್ವೆ ನಿಲ್ದಾಣ ಮತ್ತು ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ಮಲ್ಲೋರಹಳ್ಳಿ ಮ್ಯಾಸರಹಟ್ಟಿ, ಬಲ್ಲನಾಯಕನಹಟ್ಟಿ, ಮಲ್ಲೂರಹಟ್ಟಿ, ಕುದಾಪುರ, ದಾಸರಮುತ್ತೇನಹಳ್ಳಿ, ರೇಖಲಗೆರೆ, ರೇಖಲಗೆರೆ ಲಂಬಾಣಿಹಟ್ಟಿ, ನನ್ನಿವಾಳ, ಬೆಳಗೆರೆ, ನಾರಾಯಣಪುರ, ಟಿ.ಎನ್.ಕೋಟೆ, ದೊಡ್ಡೇರಿ, ತಿಮ್ಮನಹಳ್ಳಿ, ವಿಡಪನಕುಂಟೆ, ಹರವಿಗೊಂಡನಹಳ್ಳಿ, ಬಂಗಾರ
ದೇವರಹಟ್ಟಿ, ಕುರಿ ನಿಂಗಯ್ಯನ ಕಪಿಲೆ, ಕರೆಕಾಟ್ಲಹಟ್ಟಿ, ಗಡ್ದಾರ ಹಟ್ಟಿ, ಲಂಬಾಣಿಹಟ್ಟಿ, ಕೆಂಚವೀರನಹಳ್ಳಿ, ಮೀರಾಸಾಬಿಹಳ್ಳಿ ಸೇರಿ ತಾಲ್ಲೂಕಿನಲ್ಲಿ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ.

ADVERTISEMENT

‘ನಗರದ ರೈಲ್ವೆಗೇಟ್ ಹಾಗೂ ತಾಲ್ಲೂಕಿನ ಬೆಳಗೆರೆ ಮತ್ತು ಜೋಗಿಹಟ್ಟಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಯಾಗಿ ಒಂದೆರಡು ವರ್ಷ ಆಗಿದೆ. ಆ ಘಟಕಗಳಿಗೆ ಇದುವರೆಗೆ ಚಾಲನೆ ನೀಡದಿರುವುದು ವಿಪರ್ಯಾಸ’ ಎಂದು ಜೋಗಿಹಟ್ಟಿಯ ವೆಂಕಟೇಶ್ ಬೇಸರಿಸಿದರು.

‘ತಾಲ್ಲೂಕಿನ ಕೆಲ ಗ್ರಾಮದಲ್ಲಿ ಘಟಕ ಸ್ಥಾಪನೆಗೆ ಬಳಕೆ ಮಾಡಿದ್ದ ಸಲಕರಣೆಗಳು ಕಳಪೆಯಾಗಿದ್ದ ಕಾರಣ ಆ ಸಲಕರಣೆಗಳು ಈಗ ತುಕ್ಕು ಹಿಡಿದಿವೆ. ಅಳವಡಿಸಿದ್ದ ಗ್ಲಾಸಿನ ಬಾಗಿಲು ಮುರಿದು ಹೋಗಿವೆ. ವಿದ್ಯುತ್ ಸಂಪರ್ಕದ ತಂತಿ ಕಿತ್ತು ಹೋಗಿದೆ. ನೀರು ಸರಬರಾಜಿನ ಪೈಪ್ ಒಡೆದು ತುಂಡು ತುಂಡಾಗಿ ಬಿದ್ದಿವೆ. ದುರಸ್ತಿ ಮಾಡದ ಕಾರಣಕೆಲ ಘಟಕಗಳು ಪಾಳು ಬಿದ್ದಿವೆ. ಘಟಕ ಸ್ಥಾಪನೆಗಾಗಿ ಖರ್ಚು ಮಾಡಿದ ಸರ್ಕಾರದ ಲಕ್ಷಾಂತರ ರೂಪಾಯಿ ವ್ಯರ್ಥವಾದಂತಾಗಿದೆ’ ಎಂದು ದೂರಿದರು ತಿಪ್ಪೇಸ್ವಾಮಿ.

‘ಯಾರೂ ಕುಡಿಯುವ ಶುದ್ಧ ನೀರಿಗಾಗಿ ಯಾರನ್ನೂ ಪ್ರಶ್ನೆ ಮಾಡುತ್ತಿಲ್ಲ. ಇದರಿಂದ ಘಟಕಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಘಟಕಗಳ ದುರಸ್ತಿಗೆ ಕ್ರಮ ಕೈಗೊಂಡು, ಶುದ್ಧ ನೀರು ಪೂರೈಸಬೇಕು’ ಎಂದು ಬಿ.ಕಾಟಯ್ಯ, ನಾಗರಾಜ, ಶ್ರೀಧರ ಒತ್ತಾಯಿಸಿದ್ದಾರೆ.

‘ಕೆಟ್ಟು ನಿಂತ ಘಟಕಗಳನ್ನು ದುರಸ್ತಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಎರಡು ಪತ್ರ ಬರೆಯಲಾಗಿದೆ. ಕರೆ ಮಾಡಿ ಮಾಹಿತಿ ನೀಡಿದರೂ ಬಂದು ದುರಸ್ತಿ ಮಾಡಿಸುತ್ತೇವೆ ಎಂದವರು ಯಾರೂ ಬಂದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಹೇಳಿದರು.

‘ಪ್ರತಿದಿನ 6-7 ಗ್ರಾಮಗಳಿಗೆ ಭೇಟಿ ನೀಡಿದ್ದು, ಎರಡು ಗ್ರಾಮಗಳಲ್ಲಿ ಮಾತ್ರ ನೀರಿನ ಘಟಕಗಳು ಕಾರ್ಯ
ನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದರಿಂದ ಸಮಸ್ಯೆ ಎದುರಾಗಿದೆ. ಇದಕ್ಕೆ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳ ವೈಫಲ್ಯವೇ ಕಾರಣ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್‌
ಎನ್. ರಘುಮೂರ್ತಿ ಹೇಳಿದರು.

***

ನೀರಿನ ಘಟಕಗಳು ಹಾಳಾದ ಕುರಿತುಸಂಬಂಧಪಟ್ಟ ಎಂಜಿನಿಯರ್‌ಗಳ ಜತೆ ಚರ್ಚಿಸಿಶೀಘ್ರ ದುರಸ್ತಿ ಮಾಡುವಂತೆ ಸೂಚಿಸಲಾಗುವುದು.

-ಎನ್. ರಘುಮೂರ್ತಿ, ತಹಶೀಲ್ದಾರ್‌

***

ದುರಸ್ತಿ ಮಾಡದ ಕಾರಣ ಕೆಲ ಘಟಕಗಳು ಪಾಳು ಬಿದ್ದಿವೆ. ಇನ್ನು ಕೆಲವು ಅನೈತಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿವೆ. ನೀರಿನ ಘಟಕದ ದುರಸ್ತಿ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ.

-ತಿಪ್ಪೇಸ್ವಾಮಿ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.