ADVERTISEMENT

ಚಿತ್ರದುರ್ಗ: ಅಪೂರ್ಣ ಭವನದಲ್ಲೇ ವಾಲ್ಮೀಕಿ ಜಯಂತಿ..!

ಅವೈಜ್ಞಾನಿಕ ರೀತಿಯಲ್ಲಿ ವೇದಿಕೆ ನಿರ್ಮಾಣ; ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆ

ಎಂ.ಎನ್.ಯೋಗೇಶ್‌
Published 7 ಅಕ್ಟೋಬರ್ 2025, 6:19 IST
Last Updated 7 ಅಕ್ಟೋಬರ್ 2025, 6:19 IST
ಅಪೂರ್ಣ ಕಾಮಗಾರಿ ನಡುವೆಯೇ ವಾಲ್ಮೀಕಿ ಭವನಕ್ಕೆ ಆಕರ್ಷಕ ದೀಪಾಲಂಕಾರ ಮಾಡಿರುವುದು
ಅಪೂರ್ಣ ಕಾಮಗಾರಿ ನಡುವೆಯೇ ವಾಲ್ಮೀಕಿ ಭವನಕ್ಕೆ ಆಕರ್ಷಕ ದೀಪಾಲಂಕಾರ ಮಾಡಿರುವುದು   

ಚಿತ್ರದುರ್ಗ: ಕಾಮಗಾರಿ ಅಪೂರ್ಣಗೊಂಡು ಬಾಗಿಲು ಮುಚ್ಚಿದ ಸ್ಥಿತಿಯಲ್ಲೇ ಇದ್ದ ವಾಲ್ಮೀಕಿ ಭವನದಲ್ಲಿ ಮಂಗಳವಾರ (ಅ.7) ವಾಲ್ಮೀಕಿ ಜಯಂತಿ ಆಚರಿಸುತ್ತಿರುವುದಕ್ಕೆ ಸಮುದಾಯದ ಸದಸ್ಯರಿಂದ ಆಕ್ರೋಶ ವ್ಯಕ್ತವಾಗಿದೆ. ತರಾತುರಿಯಲ್ಲಿ ಬಾಗಿಲು ತೆರೆದು, ಕಸ ಗುಡಿಸಿ, ತೊಳೆದು ಅಪೂರ್ಣ ವೇದಿಕೆಗೆ ಅಲಂಕಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಹಳ್ಳದಂತಿರುವ ಭವನದ ಮುಖ್ಯ ವೇದಿಕೆ ಅವೈಜ್ಞಾನಿಕವಾಗಿದೆ. ಹಿಂಬದಿ ಕುರ್ಚಿಯಲ್ಲಿ ಕುಳಿತವರಿಗೆ ವೇದಿಕೆಯೇ ಸರಿಯಾಗಿ ಕಾಣಿಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಸಭಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಭವನದಿಂದ ಹೊರಕ್ಕೆ ಒಳಚರಂಡಿ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ಒಳಗಿನಿಂದ ನೀರು ಬಿಟ್ಟರೆ ಜಿಲ್ಲಾ ಆಸ್ಪತ್ರೆ ಭಾಗದ ರಸ್ತೆಗೆ ಹರಿಯುತ್ತದೆ. ಊಟದ ಹಾಲ್‌ನಿಂದ ನೀರು ಹರಿಸಿದರೆ ವಾಪಸ್‌ ಸಭಾಂಗಣದ ಕಡೆಗೇ ನೀರು ಹರಿಯುತ್ತದೆ.

ಜೊತೆಗೆ ಶೌಚಾಲಯ, ವಾಶ್‌ ಬೇಸಿನ್‌ಗೂ ನೀರಿನ ಸಂಪರ್ಕವಿಲ್ಲ. ಧ್ವನಿ, ಬೆಳಕಿನ ವ್ಯವಸ್ಥೆಯೂ ಸರಿಯಾಗಿ ಇಲ್ಲ. ಇಲ್ಲಿಯವರೆಗೂ ಸ್ವಚ್ಛಗೊಳಿಸದ ಕಾರಣ ಇಡೀ ಆವರಣ, ಒಳಭಾಗದಲ್ಲಿ ಇಲಿ, ಹೆಗ್ಗಣಗಳು ವಾಸಿಸುತ್ತಿದ್ದವು. ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ಒಂದು ದಿನದ ಹಿಂದಷ್ಟೇ ಬಾಗಿಲು ತೆರೆಯಲಾಗಿದ್ದು, ತರಾತುರಿಯಲ್ಲಿ ಸ್ವಚ್ಛಗೊಳಿಸಲಾಗಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು ಮರೆಮಾಚಿ ದೀಪಾಲಂಕಾರ ಅಳವಡಿಸಲಾಗಿದೆ.

ADVERTISEMENT

ನೆಲಮಹಡಿಯ ಊಟದ ಹಾಲ್‌ ಅವ್ಯವಸ್ಥೆಯ ಆಗರವಾಗಿದೆ. ನೀರು ಹೊರಹೋಗುವ ವ್ಯವಸ್ಥೆಯೂ ಇಲ್ಲ. ಈಗ ಹೊರಗಿನಿಂದ ಟ್ಯಾಂಕರ್‌ ತಂದು ನೀರು ಪೂರೈಸಿ ವಾಲ್ಮೀಕಿ ಜಯಂತಿ ಆಚರಣೆಗೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ‘ಜಯಂತಿ ಆಚರಣೆ ನಂತರ ಆಗುವ ಕಸ, ಕೊಳಚೆ ನೀರಿನ ಸಮಸ್ಯೆಯನ್ನು ಯಾರೂ ಸರಿಪಡಿಸುವುದಿಲ್ಲ. ಮತ್ತೆ ಇಡೀ ಭವನ ದುರ್ವಸನೆಯಲ್ಲಿ ಮುಳುಗುತ್ತದೆ. ತಿಂಗಳಿರುವಾಗಲೇ ಕಾಮಗಾರಿ ಮುಗಿಸಿ ಜಯಂತಿ ಆಚರಣೆ ಮಾಡಬೇಕಾಗಿತ್ತು’ ಎಂದು ಸಮುದಾಯದ ಮುಖಂಡರು ಹೇಳಿದರು.

2017ರಲ್ಲಿ ವಾಲ್ಮೀಕಿ ಭವನದ ಕಾಮಗಾರಿ ಆರಂಭವಾಗಿತ್ತು. ಕುಂಟುತ್ತಲೇ ಸಾಗುತ್ತಿದ್ದ ಕಾಮಗಾರಿ 2023ರವರೆಗೂ ಪೂರ್ಣಗೊಳ್ಳಲಿಲ್ಲ. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾತುರಿಯಲ್ಲಿ ಅಪೂರ್ಣ ಕಾಮಗಾರಿಯಾದ ಕಟ್ಟಡವನ್ನೇ ಉದ್ಘಾಟನೆ ಮಾಡಿದ್ದರು. ಸಮಾಜದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳಿಗೂ ಮಾಹಿತಿ ನೀಡಿದೇ ಅಧಿಕಾರಿಗಳ ಸಮ್ಮುಖದಲ್ಲೇ ಉದ್ಘಾಟನೆ ನೆರವೇರಿಸಲಾಗಿತ್ತು.

200X100 ಅಳತೆಯ ಜಾಗದಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ ಬೃಹತ್‌ ಸಭಾಂಗಣ, ಸಾಂಸ್ಕೃತಿಕ ತಾಣವಾಗುವ ಕನಸು ಹೊಂದಲಾಗಿತ್ತು. ಹಳೆಯ ನಗರಸಭೆ ಕಟ್ಟಡ ತೆರವುಗೊಳಿಸಿ ವಾಲ್ಮೀಕಿ ಭವನದ ಯೋಜನೆ ರೂಪಿಸಲಾಗಿತ್ತು. ಬೆಂಗಳೂರಿನ ಕಂಪನಿಯೊಂದಕ್ಕೆ ನಿರ್ಮಾಣ ಜವಾಬ್ದಾರಿ ನೀಡಲಾಗಿತ್ತು. ಆದರೆ ಕಾಮಗಾರಿ ಅಪೂರ್ಣಗೊಂಡಿದ್ದು, ಗುತ್ತಿಗೆದಾರರು ಕಾಲ್ಕಿತ್ತಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಕಾಮಗಾರಿ ಇಲ್ಲಿಯವರೆಗೂ ಆರಂಭವಾಗಿರಲಿಲ್ಲ. ‘ಈಗ ತರಾತುರಿಯಲ್ಲಿ ಜಯಂತಿ ಮಾಡಿ ಸಮುದಾಯಕ್ಕೆ ಅವಮಾನ ಮಾಡಲಾಗುತ್ತಿದೆ’ ಎಂದು ಮುಖಂಡರು ಆರೋಪಿಸಿದರು.

ಬಾಕಿ ಕಾಮಗಾರಿ ಪೂರ್ಣಗೊಳಿಸಲು ಇತ್ತೀಚೆಗೆ ಕೆಎಂಇಆರ್‌ಸಿಯಿಂದ ₹ 60 ಲಕ್ಷ ಮಂಜೂರಾಗಿದೆ. ಆದರೆ, ಅಂತಿಮವಾಗಿ ಅನುಮೋದನೆ ದೊರೆಯದ ಕಾರಣ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಕಾಮಗಾರಿ ಬಾಗಿಲು ಮುಚ್ಚಿದ ಸ್ಥಿತಿಯಲ್ಲೇ ಇತ್ತು. ಈಗ ಜಯಂತಿ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಸ್ವಚ್ಛಗೊಳಿಸಿ ಸಭಾಂಗಣವನ್ನು ಸಜ್ಜುಗೊಳಿಸಲಾಗಿದೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮದ ವೇಳೆ ಕುಡಿಯುವುದಕ್ಕೆ ಕ್ಯಾನ್‌ ನೀರು ತರಿಸಿದ್ದೇವೆ. ಮೂಲ ಸೌಲಭ್ಯವನ್ನು ಒದಗಿಸಿ ಜಯಂತಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು
ಎಚ್‌.ದಿವಾಕರ್‌ ಪರಿಶಿಷ್ಟ ವರ್ಗಗಳ ಜಿಲ್ಲಾ ಅಧಿಕಾರಿ

ಬಾಗಿಲು ತೆರೆಸುವಲ್ಲಿ ಯಶಸ್ವಿ

‘ಮೂರು ವರ್ಷಗಳಿಂದ ಮುಚ್ಚಿದ ಸ್ಥಿತಿಯಲ್ಲೇ ಇದ್ದ ಭವನದ ಬಾಗಿಲನ್ನು ಕಡೆಗೂ ತೆರೆಸುವಲ್ಲಿ ಯಶಸ್ವಿಯಾಗಿದ್ದೇವೆ. ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಬೆದರಿಸಿ ಗುತ್ತಿಗೆದಾರರನ್ನು ಕರೆಸಿ ಬಾಗಿಲು ತೆರೆಸಿದ್ದೇವೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಈ ಬಾರಿ ಇಲ್ಲಿಯೇ ವಾಲ್ಮೀಕಿ ಜಯಂತಿ ನಡೆಯುತ್ತಿರುವುದಕ್ಕೆ ಸಂತೋಷವಿದೆ. ಇನ್ನುಮುಂದೆ ನಿರಂತರವಾಗಿ ಕಾರ್ಯಕ್ರಮ ಮಾಡುವಂತೆ ತಿಳಿಸಿದ್ದೇವೆ’ ಎಂದು ವಾಲ್ಮೀಕಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಜೆ.ಕೃಷ್ಣಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.