ADVERTISEMENT

ಶೋಷಿತರಿಗೆ ಸ್ವಾತಂತ್ರ್ಯ ನೀಡಿದ ಸಂವಿಧಾನ

ಸಂವಿಧಾನ ದಿನಾಚರಣೆ; ಮಾಜಿ ಸಚಿವ ಆಂಜನೇಯ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:52 IST
Last Updated 27 ನವೆಂಬರ್ 2025, 4:52 IST
ಚಿತ್ರದುರ್ಗದ ಲಿಡ್ಕರ್ ಭವನದ ಶಿವಶರಣ ಮಾದಾರ ಚನ್ನಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್‌. ಆಂಜನೇಯ ಉದ್ಘಾಟಿಸಿದರು
ಚಿತ್ರದುರ್ಗದ ಲಿಡ್ಕರ್ ಭವನದ ಶಿವಶರಣ ಮಾದಾರ ಚನ್ನಯ್ಯ ಸಭಾಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್‌. ಆಂಜನೇಯ ಉದ್ಘಾಟಿಸಿದರು   

ಚಿತ್ರದುರ್ಗ: ‘ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮದವರು ಜ್ಯಾತ್ಯತೀತವಾಗಿ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಬ್ರಿಟಿಷರ ಗುಲಾಮಗಿರಿಯಿಂದ ನಮಗೆ ಮುಕ್ತಿ ದೊರೆಯಿತು’ ಎಂದು ಮಾಜಿ ಸಚಿವ ಎಚ್‌. ಆಂಜನೇಯ ತಿಳಿಸಿದರು.

ನಗರದ ಲಿಡ್ಕರ್ ಭವನದ ಶಿವಶರಣ ಮಾದಾರ ಚನ್ನಯ್ಯ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶದಲ್ಲಿ ಜಾರಿಯಾದ ಸಂವಿಧಾನ, ಮಹಿಳೆಯರು ಹಾಗೂ ಶೋಷಿತರಿಗೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ದೊರಕಿಸಿಕೊಟ್ಟಿತ್ತು’ ಎಂದರು.

ADVERTISEMENT

‘ಸಂವಿಧಾನ ಜಾರಿಯಿಂದ ರಾಜಪ್ರಭುತ್ವ ಕೊನೆಗೊಂಡು ಮತಪೆಟ್ಟಿಗೆಗಳಿಂದ ಜನಪ್ರತಿನಿಧಿಗಳು ಉದಯವಾಗುವಂತೆ ಆಯಿತು. ಸಂವಿಧಾನ ನಮಗೆ ಹಕ್ಕುಗಳ ಜೊತೆಗೆ ಪಾಲಿಸಬೇಕಾದ ಕರ್ತವ್ಯಗಳನ್ನು ಸಹ ತಿಳಿಸಿದೆ’ ಎಂದು ಹೇಳಿದರು.

‘ಡಾ.ಬಿ.ಆರ್‌.ಅಂಬೇಡ್ಕರ್ ಶೋಷಿತರಿಗೆ ಸಂವಿಧಾನದ ಮೂಲಕ ನ್ಯಾಯ ದೊರಕಿಸಿಕೊಟ್ಟು ವಿಮೋಚಕರು ಎಂದು ಹೆಸರಾಗಿದ್ದಾರೆ. ಪ್ರತಿಯೊಬ್ಬ ಭಾರತಿಯರಿಗೂ ಆ. 15 ಹಾಗೂ ಜನವರಿ 26 ರಾಷ್ಟ್ರೀಯ ಹಬ್ಬಗಳಾಗಿವೆ’ ಎಂದರು.

‘ವಿಶ್ವದಲ್ಲಿರುವ ಎಲ್ಲಾ ಸರ್ವ ಧರ್ಮಗಳ ಸಾರ ಭಾರತದ ಸಂವಿಧಾನದಲ್ಲಿ ಅಡಕವಾಗಿದೆ. ಮಾನವ ಕುಲದ ಶ್ರೇಯೋಭಿವೃದ್ಧಿಯೇ ಸಂವಿಧಾನದ ಆಶಯವಾಗಿದೆ’ ಎಂದು ಪ್ರೊ.ಡಿ.ಎಚ್‌. ನಟರಾಜ ಅಭಿಪ್ರಾಯ ವ್ಯಕ್ತಪಡಿಸಿದರು.

‘1946ರಲ್ಲಿ ಬ್ರಿಟಿಷ್‌ ಸರ್ಕಾರ ಭಾರತದ ಸಂವಿಧಾನ ರಚನಾ ಸಮಿತಿ ಸ್ಥಾಪಿಸಿತು. ಡಾ. ಸಚ್ಚಿದಾನಂದ ಸಿನ್ಹ ಸಂವಿಧಾನ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿದ್ದರು. ನಂತರ ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ, ಅಂಬೇಡ್ಕರ್ ಕರಡು ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ವಿಶ್ವದ 60 ದೇಶಗಳ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ನಮ್ಮ ದೇಶದ ಸಂವಿಧಾನವನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

‘ಸಂವಿಧಾನ ಪ್ರತಿಯೊಬ್ಬರಿಗೂ ತಾಯಿ ಇದ್ದಂತೆ. ಯಾವುದೇ ಸರ್ಕಾರಗಳು ಸಂವಿಧಾನ ಉಲ್ಲಂಘಿಸಿ ನಡೆದುಕೊಳ್ಳಬಾರದು’ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಆರ್‌.ಶಿವಣ್ಣ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಂವಿಧಾನ ಪೀಠಿಕೆ ಬೋಧಿಸಿದರು. ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್‌. ಮೈಲಾರಪ್ಪ, ಲಿಡ್ಕರ್‌ ಮಾಜಿ ಅಧ್ಯಕ್ಷ ಓ.ಶಂಕರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶಿವಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್‌. ಗಾಯತ್ರಿ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ, ಉಪವಿಭಾಗಾಧಿಕಾರಿ ಮೆಹಬೂಬ್‌ ಜಿಲಾನಿ ಖುರೇಶಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್‌ ಕಾಳಿಸಿಂಗೆ ಇದ್ದರು.

ಗಮನ ಸೆಳೆದ ಸಂವಿಧಾನ

ಜಾಗೃತಿ ಜಾಥ ಸಂವಿಧಾನ ದಿನಾಚರಣೆ ಅಂಗವಾಗಿ ನಗರದ ಐತಿಹಾಸಿಕ ಕೋಟೆ ಆವರಣದ ಬಳಿ ಅಂಬೇಡ್ಕರ್‌ ಪುತ್ಥಳಿ ಹಾಗೂ ಸಂವಿಧಾನ ಪ್ರತಿಕೃತಿ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆ ವಿದ್ಯಾರ್ಥಿಗಳು ಸಂವಿಧಾನ ಜಾಗೃತಿಗೆ ಸಂಬಂಧಿಸಿದ ಸಂದೇಶಗಳನ್ನು ಘೋಷಿಸುವ ಮೂಲಕ ಸಂಭ್ರಮ ಹಾಗೂ ಸಡಗರದಿಂದ ಮೆರವಣಿಗೆಯಲ್ಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆ ಕೋಟೆ ಮುಂಭಾಗದಿಂದ ಪ್ರಾರಂಭವಾಗಿ ಕಾಮನಬಾವಿ ಬಡಾವಣೆ ಕರುವಿನಕಟ್ಟೆ ಸರ್ಕಲ್‌ ಜೋಗಿಮಟ್ಟಿ ರಸ್ತೆ ಬುದ್ದ ಪ್ರತಿಮೆ ಸ್ಟೇಡಿಯಂ ರಸ್ತೆ ಹಳೇ ವೈಶಾಲಿ ವೃತ್ತ ಮದಕರಿ ನಾಯಕ ವೃತ್ತದ ಮೂಲಕ ಸಾಗಿ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ತೆರೆ ಬಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.