ADVERTISEMENT

ಮೊಳಕಾಲ್ಮುರು ತಾಲ್ಲೂಕು ಬಳ್ಳಾರಿಗೆ ಸೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 14:06 IST
Last Updated 21 ನವೆಂಬರ್ 2020, 14:06 IST
ಕುಮಾರಗೌಡ
ಕುಮಾರಗೌಡ   

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಜಿ.ಕುಮಾರಗೌಡ ಒತ್ತಾಯಿಸಿದರು.

‘ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ನ್ಯಾಯಾಲಯ ಸೇರಿ ಇತರೆ ಕೆಲಸಗಳಿಗೆ ಮೊಳಕಾಲ್ಮುರಿನಿಂದ ಚಿತ್ರದುರ್ಗಕ್ಕೆ ಬರಲು 117 ಕಿ.ಮೀ ದೂರ ಆಗಲಿದೆ. ಒಂದೇ ಕೆಲಸಕ್ಕೆ ಒಂದು ದಿನ ವ್ಯರ್ಥವಾಗುತ್ತದೆ. ಬಳ್ಳಾರಿ ಕೇವಲ 35 ಕಿ.ಮೀ ದೂರದಲ್ಲಿದ್ದು, ಅಲ್ಲಿಗೆ ಸೇರಿಸಿದರೆ ಜನರಿಗೆ ಅನುಕೂಲವಾಗಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಮೊಳಕಾಲ್ಮುರು ತಾಲ್ಲೂಕಿನ 202 ಗ್ರಾಮಗಳ ಪೈಕಿ 105 ಕಂದಾಯ ಗ್ರಾಮ, ನಾಲ್ಕು ಜಿಲ್ಲಾ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯನ್ನು ಬಳ್ಳಾರಿಗೆ ಸೇರಿಸಿದರೆ ಈವರೆಗೆ ಆರೋಗ್ಯ, ಶಿಕ್ಷಣ, ಉದ್ಯೋಗದಿಂದ ವಂಚಿತರಾದವರಿಗೆ ಹೈದರಾಬಾದ್ ಕರ್ನಾಟಕದ ಸೌಲಭ್ಯಗಳು ದೊರೆಯಲಿವೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಬಳಿಯೂ ಚರ್ಚಿಸಲಿದ್ದೇವೆ’ ಎಂದರು.

ADVERTISEMENT

‘ಮೊಳಕಾಲ್ಮುರಿನ ಪ್ರಮುಖ ಬೆಳೆಗಳನ್ನು ಯಾವ ರೈತರೂ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ತರುವುದಿಲ್ಲ. ಹತ್ತಿರವಿರುವ ಬಳ್ಳಾರಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಸ್ನೇಹ, ಸಂಬಂಧದ ನಂಟು ಆ ಜಿಲ್ಲೆಯೊಂದಿಗೆ ಹೆಚ್ಚಿದೆ. ಆದ್ದರಿಂದ ಡಿಸೆಂಬರ್ ಮೂರನೇ ವಾರದಲ್ಲಿ ನಿಯೋಗ ತೆರಳಿ ಮುಖ್ಯಮಂತ್ರಿಗೆ ಮನವಿ ಮಾಡಲಿದ್ದೇವೆ’ ಎಂದು ಹೇಳಿದರು.

ರಾಜ್ಯ ಸರ್ಕಾರ ಹೊಸದಾಗಿ ವಿಜಯನಗರ ಜಿಲ್ಲೆ ಘೋಷಿಸಿದ್ದು, ಅಲ್ಲಿಗೆ 6 ತಾಲ್ಲೂಕು ಸೇರ್ಪಡೆಗೊಳ್ಳಲಿದೆ. ಬಳ್ಳಾರಿ ಜಿಲ್ಲೆಗೆ 5 ತಾಲ್ಲೂಕು ಉಳಿಯಲಿದೆ. ಮೊಳಕಾಲ್ಮುರು ಸೇರ್ಪಡೆಯಾದರೆ, ಎಲ್ಲ ರೀತಿಯಿಂದಲೂ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಸರ್ಕಾರ ಈ ಬೇಡಿಕೆ ಈಡೇರಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.