ADVERTISEMENT

20 ದಿನದೊಳಗೆ ಒಳ ಮೀಸಲಾತಿ ಜಾರಿ: ಎಚ್‌.ಆಂಜನೇಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 18:36 IST
Last Updated 2 ಆಗಸ್ಟ್ 2025, 18:36 IST
<div class="paragraphs"><p>ಎಚ್‌.ಆಂಜನೇಯ</p></div>

ಎಚ್‌.ಆಂಜನೇಯ

   

ಚಿತ್ರದುರ್ಗ: ‘ಒಳ ಮೀಸಲಾತಿ ಜಾರಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅವರು ಆಗಸ್ಟ್‌ 4ರಂದು (ಸೋಮವಾರ)  ಅಂತಿಮ ವರದಿ ಸಲ್ಲಿಸಲಿದ್ದಾರೆ. ವರದಿ ಸ್ವೀಕರಿಸಿದ 20 ದಿನದೊಳಗಾಗಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆ ಇದೆ. ಈ ಕುರಿತು ಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಹೇಳಿದರು.

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರದ ಕಡೆಯಿಂದ ವಿಳಂಬವಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿ ಹಿಂದಿನಿಂದಲೂ ಇದ್ದ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸೇರಿದಂತೆ ಕೆಲವು ಗೊಂದಲಗಳು ಶಾಶ್ವತವಾಗಿ ಬಗೆಹರಿದಿವೆ. ದೇಶದಲ್ಲೇ ಮೊದಲ ಬಾರಿ ಆ್ಯಪ್‌ ಮೂಲಕ ಸಮೀಕ್ಷೆ ನಡೆಸಲಾಗಿದೆ. ಹಿಂದುಳಿದಿರುವಿಕೆ ಬಗ್ಗೆ ಆಯೋಗ ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ನಡೆಸಿ ವರದಿ ನೀಡುತ್ತಿದೆ. ಒಳ ಮೀಸಲಾತಿ ಜಾರಿಗಾಗಿ ದಿನಗಣನೆ ಆರಂಭವಾಗಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಮೊದಲು ಒಳ ಮೀಸಲಾತಿ ಜಾರಿ ಅಧಿಕಾರ ರಾಜ್ಯಗಳಿಗೆ ಇರಲಿಲ್ಲ. ಒಳಮೀಸಲು ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರ ಇತ್ತು. ಈಗ ಸುಪ್ರೀಂ ಕೋರ್ಟ್‌ ಜಾರಿ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಸಂಪೂರ್ಣ ದತ್ತಾಂಶದ ಆಧಾರದ ಮೇಲೆ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಮ್ಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಲಿದೆ’ ಎಂದರು.

‘ಮಾದಿಗರು ಒಳಮೀಸಲಾತಿಗಾಗಿ ಮೂರೂವರೆ ದಶಕ ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಆಯೋಗ ರಚಿಸಿ, ನೇಮಕಾತಿ ಸ್ಥಗಿತಗೊಳಿಸಿದ ನಂತರ ಹೋರಾಟಕ್ಕೆ ತೆರೆ ಬಿದ್ದಿದೆ. ಇಷ್ಟಾದರೂ ಬಿಜೆಪಿ ಮುಖಂಡರು ವಿನಾಕಾರಣ ಪ್ರತಿಭಟನೆ ನಡೆಸಿ ಮುಗ್ಧ ಮಾದಿಗರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದರು.

‘ಮೊದಲ ಸಚಿವ ಸಂಪುಟದಲ್ಲೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಸರ್ಕಾರ ಹೇಳಿತ್ತು ಎಂಬುದೇ ತಪ್ಪು. ಈ ವಿಚಾರದಲ್ಲಿ  ಮಾಜಿ ಸಚಿವ ಎ.ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದರು.

‘ಒಳಮೀಸಲಾತಿ ವಿಚಾರದಲ್ಲಿ ನಕಲಿ ಹೋರಾಟಗಾರರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಅಧಿವೇಶನದ ವೇಳೆಗೆ ಒಳಮೀಸಲಾತಿ ಜಾರಿಗೆ ಬರಲಿದೆ. ನಮ್ಮ ಬಹುಕಾಲದ ಬೇಡಿಕೆ ಈಡೇರಲಿದೆ. ಇನ್ನೊಂದು ತಿಂಗಳು ಕಾದರೆ ನಮಗೆ ನ್ಯಾಯ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.