ADVERTISEMENT

ಕೈದಿಗಳ ಪೆರೋಲ್‌ಗೆ ನಡೆಯುತ್ತಿದೆ ಸಿದ್ಧತೆ

ಅರ್ಹರ ಆಯ್ಕೆ ಪ್ರಕ್ರಿಯೆ ಆರಂಭ, ವಾರದಲ್ಲಿ ತೀರ್ಮಾನ ಸಾಧ್ಯತೆ

ಜಿ.ಬಿ.ನಾಗರಾಜ್
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST

ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕಾರಾಗೃಹದಲ್ಲಿರುವ ಕೈದಿಗಳನ್ನು ಪೆರೋಲ್‌ ಅಥವಾ ಮಧ್ಯಂತರ ಜಾಮೀನು ಮೇಲೆ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಕೈದಿಗಳ ಆಯ್ಕೆಗೆ ಸಿದ್ಧತೆ ನಡೆಯುತ್ತಿದೆ.

ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ 149 ಕೈದಿಗಳಿದ್ದಾರೆ. ಇದರಲ್ಲಿ ಇಬ್ಬರು ಮಾತ್ರ ಅಪರಾಧಿಗಳಾಗಿದ್ದು, ಉಳಿದವರ ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ. ಪೆರೋಲ್‌ ಅಥವಾ ಜಾಮೀನು ನೀಡಬಹುದಾದ ಕೈದಿಗಳ ಪಟ್ಟಿಯನ್ನು ಕಾರಾಗೃಹದ ಅಧೀಕ್ಷಕರು ಸಿದ್ಧಪಡಿಸುತ್ತಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ವೈ.ವಟವಟಿ ನೇತೃತ್ವದ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಕೂಡ ಸಮಿತಿಯಲ್ಲಿದ್ದಾರೆ.

ಕೈದಿಗಳನ್ನು ಸೋಂಕಿನಿಂದ ರಕ್ಷಿಸಲು ಹಾಗೂ ಕಾರಾಗೃಹದಲ್ಲಿರುವ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡಲು ಪೆರೋಲ್‌ ಮೇಲೆ ಬಿಡುಗಡೆ ಮಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದ ಉನ್ನತಾಧಿಕಾರ ಸಮಿತಿಯ ಶಿಫಾರಸಿನ ಮೇರೆಗೆ ಕೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಗುರಿಯಾದ ಕೈದಿಗಳಿಗೆ ಪೆರೋಲ್‌ ಭಾಗ್ಯ ಸಿಗಲಿದೆ. ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ಲಭಿಸಲಿದೆ. ಕಾರಾಗೃಹ ವಾಸಿಗಳು ಹೊರಗೆ ಇರಬೇಕಾದ ಅವಧಿಯನ್ನು ಸಮಿತಿ ತೀರ್ಮಾನಿಸಲಿದೆ.

ADVERTISEMENT

‘ಸರ್ಕಾರದ ನಿರ್ದೇಶನದ ಪ್ರಕಾರ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಗಂಭೀರವಲ್ಲದ ಪ್ರಕರಣಗಳಲ್ಲಿ ಜೈಲು ಸೇರಿದವರಿಗೆ ಮಾತ್ರ ಬಿಡುಗಡೆ ಅವಕಾಶ ಸಿಗಲಿದೆ. ಕೊಲೆ, ಅತ್ಯಾಚಾರ, ಡಕಾಯಿತಿ, ರಾಬರಿ ಸೇರಿ ಗಂಭೀರ ಸ್ವರೂಪದ ಪ್ರಕರಣದಲ್ಲಿ ಭಾಗಿಯಾದವರು ಹಾಗೂ ಪದೇ ಪದೇ ಅಪರಾಧ ಕೃತ್ಯದಲ್ಲಿ ತೊಡಗಿದವರನ್ನು ಬಿಡುಗಡೆ ಮಾಡುವುದಿಲ್ಲ’ ಎಂದು ಕಾರಾಗೃಹದ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಪೆರೋಲ್‌ ಅವಧಿ ಪೂರ್ಣಗೊಂಡ ಬಳಿಕ ಕೈದಿಗಳು ಕಾರಾಗೃಹಕ್ಕೆ ಮರಳಬೇಕು. ವಿಚಾರಣಾಧೀನ ಕೈದಿಗಳು ಜಾಮೀನು ಪಡೆದರೆ ಮತ್ತೆ ಜೈಲಿಗೆ ಮರಳುವ ಅಗತ್ಯವಿಲ್ಲ. ಇದನ್ನು ಕೈದಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರಾಗೃಹದ ಸಿಬ್ಬಂದಿ ಮಾಡುತ್ತಿದ್ದಾರೆ.

ಜಿಲ್ಲಾ ಕಾರಾಗೃಹ ವಿಚಾರಣಾಧೀನ ಕೈದಿಗಳಷ್ಟೇ ಮೀಸಲು. ಶಿಕ್ಷೆಗೆ ಗುರಿಯಾದವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತದೆ. ಶಿಕ್ಷೆ ನಿಗದಿಯಾದ ಇಬ್ಬರು ಕೈದಿಗಳು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಮುನ್ನವೇ ಲಾಕ್‌ಡೌನ್‌ ಘೋಷಣೆಯಾಗಿದೆ. ಶಿವಮೊಗ್ಗದ ಕಾರಾಗೃಹಕ್ಕೆ ಇವರನ್ನು ಕರೆದೊಯ್ಯಲು ಪೊಲೀಸರು ಭದ್ರತೆ ಒದಗಿಸಬೇಕು. ಲಾಕ್‌ಡೌನ್‌ ಹಾಗೂ ಕೊರೊನಾ ನಿಯಂತ್ರಣಕ್ಕೆ ಪೊಲೀಸರು ಗಮನ ಕೇಂದ್ರೀಕರಿಸಿದ ಹಿನ್ನೆಲೆಯಲ್ಲಿ ಇಬ್ಬರು ಅಪರಾಧಿಗಳನ್ನು ಜಿಲ್ಲಾ ಕಾರಾಗೃಹದಲ್ಲೇ ಇಡಲಾಗಿದೆ.

ಕೊರೊನಾ ಭೀತಿಯಿಂದ ಕೈದಿಗಳನ್ನು ರಕ್ಷಿಸಲು ಕಾರಾಗೃಹದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಬಂಧಿಕರು ಕೈದಿಗಳನ್ನು ಭೇಟಿ ಮಾಡುವ ಅವಕಾಶವನ್ನು ನಿಷೇಧಿಸಲಾಗಿದೆ. ಕೈದಿಗಳಿಗೆ ಶುಚಿತ್ವದ ಪಾಠ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಕೈತೊಳೆಯಲು ಸೋಪು, ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ಗಳನ್ನು ನೀಡಲಾಗಿದೆ.

‘ಜಿಲ್ಲಾ ಕಾರಾಗೃಹಕ್ಕೆ ನಿತ್ಯ ಸರಾಸರಿ ಇಬ್ಬರು ಸೇರ್ಪಡೆಯಾಗುತ್ತಿದ್ದರು. ಕೊರೊನಾ ಭೀತಿ ಹಬ್ಬಿದ ಬಳಿಕ ಜೈಲು ಸೇರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಇಬ್ಬರು ಮಾತ್ರ ಕಾರಾಗೃಹಕ್ಕೆ ಬಂದಿದ್ದಾರೆ. ಇವರ ಆರೋಗ್ಯವನ್ನು ತಪಾಸಣೆ ಮಾಡಿಸಿ ಪ್ರತ್ಯೇಕ ಸೆಲ್‌ಗಳಲ್ಲಿ ಇಡಲಾಗಿದೆ. ಕ್ವಾರಂಟೈನ್‌ ಅವಧಿ ಪೂರ್ಣಗೊಂಡ ಬಳಿಕ ಉಳಿದವರೊಂದಿಗೆ ಸೇರಿಸಲಾಗುತ್ತದೆ. ಕರ್ತವ್ಯಕ್ಕೆ ಹೊರಗಿನಿಂದ ಬರುವ ಪ್ರತಿಯೊಬ್ಬ ಸಿಬ್ಬಂದಿ ಕೈತೊಳೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್‌ ಧರಿಸಿ ಕರ್ತವ್ಯ ನಿರ್ವಹಿಸಲಾಗುತ್ತಿದೆ’ ಎಂದು ಕಾರಾಗೃಹದ ಪ್ರಭಾರ ಅಧೀಕ್ಷಕ ಎ.ಎ.ಅಬ್ಬಾಸ್‌ ಅಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.