ADVERTISEMENT

ಚಿತ್ರದುರ್ಗ | ಜೆಜೆಎಂ; 10 ಹಳ್ಳಿಗಳಿಗೂ ಶುದ್ಧ ನೀರು ಬಂದಿಲ್ಲ

ದಿಶಾ ಸಭೆ; ಸಂಸದ ಗೋವಿಂದ ಕಾರಜೋಳ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:14 IST
Last Updated 24 ಸೆಪ್ಟೆಂಬರ್ 2025, 2:14 IST
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ದಿಶಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ದಿಶಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು   

ಚಿತ್ರದುರ್ಗ: ‘ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ (ಜೆಜೆಎಂ) ಜಾರಿಗೊಳಿಸಿದೆ. ಯೋಜನೆಯು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈವರೆಗೆ ಜಿಲ್ಲೆಯ 10 ಹಳ್ಳಿಗಳಿಗೂ ಶುದ್ಧ ನೀರು ಪೂರೈಸಲು ಸಾಧ್ಯವಾಗಿಲ್ಲ’ ಎಂದು ಸಂಸದ ಗೋವಿಂದ ಎಂ.ಕಾರಜೋಳ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದರು.

‘ಜಲಜೀವನ ಮಿಷನ್‌ ಅಡಿಯಲ್ಲಿ ಜಿಲ್ಲೆಗೆ 1,000 ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಯೋಜನೆಯ ಸಮರ್ಪಕ ಅನುಷ್ಠಾನದಿಂದ ನೀರಿನ ತೆರಿಗೆ ಸಂಗ್ರಹ ಜೊತೆಗೆ ನೀರಿನ ಉಳಿತಾಯವೂ ಆಗಲಿದೆ. ಆದರೆ ಜಿಲ್ಲೆಯಲ್ಲಿ ಯೋಜನೆಯ ಅನುದಾನ ದುರ್ಬಳಕೆಯಾಗಿದೆ. ಹೀಗಾಗಿ ಜೆಜೆಎಂ ಕಾಮಗಾರಿಗಳ ಕುರಿತು ತನಿಖೆಗೆ ಸಮಿತಿ ರಚಿಸಲು ನಿರ್ಧರಿಸಿರುವುದು ಸೂಕ್ತವಾಗಿದೆ. ಈ ಸಂಬಂಧ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಗೆ ಜವಾಬ್ದಾರಿ ನಿಗದಿಪಡಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಗ್ರಾಮವೊಂದರಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಯೋಜನೆಯನ್ನು ಭಾರತ ಸರ್ಕಾರದ ಅಧಿಕಾರಿಗಳು ವೀಕ್ಷಿಸಿ ಯೋಜನೆಯ ಯಶಸ್ಸಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೇ ರೀತಿಯಲ್ಲಿ ಯೋಜನೆಯನ್ನು ಜಿಲ್ಲೆಯಲ್ಲೂ ಜಾರಿಗೊಳಿಸಲು ಸಾಧ್ಯವಿದೆ. ಆದರೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವುದು ಕಂಡುಬರುತ್ತಿದ್ದು, ಅದರ ಸಮಗ್ರ ತನಿಖೆಯಾಗಬೇಕು’ ಎಂದರು.

‘ಜಿಲ್ಲೆಯ ಅಂಗನವಾಡಿ ಕಟ್ಟಡ ಹಾಗೂ ಶಾಲಾ ಕೊಠಡಿಗಳ ದುರಸ್ತಿಗೆ ಶೀಘ್ರ ಕ್ರಮವಹಿಸಬೇಕು. ನೂರಾರು ಶಾಲೆಗಳು ಶಿಥಿಲಾವಸ್ಥೆಗೆ ತಲುಪಿವೆ. ಶೌಚಾಲಯಗಳ ಕೊರತೆ ಇದೆ, ಬಹುತೇಕ ಶಾಲೆಗಳಿಗೆ ಚಾವಣಿಯೇ ಇಲ್ಲ. ಸ್ವಚ್ಛತೆಯ ಕೊರತೆಯಿಂದ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಜಿಲ್ಲಾ ಪ್ರವಾಸದ ವೇಳೆ ಶಾಲೆಗಳ ಕೆಟ್ಟ ಪರಿಸ್ಥಿತಿ ಕಂಡಿದ್ದೇನೆ’ ಎಂದು ಹೇಳಿದರು.

‘ಕೆಎಂಇಆರ್‌ಸಿ, ಡಿಎಂಎಫ್ ನಿಧಿ ಹಾಗೂ ರಾಜ್ಯ ಅನುದಾನ ಲಭ್ಯವಿದ್ದರೂ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮುಂದಿನ ಸಭೆಯೊಳಗೆ ಶೇ 100ರಷ್ಟು ಶಾಲಾ-ಅಂಗನವಾಡಿ ಕಟ್ಟಡಗಳ ದುರಸ್ತಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ ‘ಜಿಲ್ಲೆಯ 144 ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕೆಎಂಇಆರ್‌ಸಿ ಅನುಮೋದನೆ ನೀಡಿದೆ. ಏಜೆನ್ಸಿ ನಿಗದಿಪಡಿಸಿ, ಮುಂಬರುವ ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. 163 ಶಾಲಾ ಕೊಠಡಿಗಳು ದುರಸ್ತಿಯಲ್ಲಿದ್ದು,  ಈಗಾಗಲೇ 78 ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಂಡಿವೆ’ ಎಂದರು.

‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಜಾರಿಯಾಗಿದ್ದು, ಯೋಜನೆಗಾಗಿಯೇ ಕೇಂದ್ರ ಸರ್ಕಾರ ಈ ವರ್ಷ ₹ 36,000 ಕೋಟಿ ಅನುದಾನ ಒದಗಿಸಿದೆ. ರಸ್ತೆ ಸಂಪರ್ಕ ಇಲ್ಲದ ಜನವಸತಿ ಪ್ರದೇಶಗಳನ್ನೂ ಗ್ರಾಮ ಎಂಬುದಾಗಿ ಪರಿಗಣಿಸಿ, ಹೊಸದಾಗಿ ರಸ್ತೆ ನಿರ್ಮಿಸಬೇಕು. ಹೊಸ ಮಾರ್ಗಸೂಚಿ ಅನ್ವಯ ಪ್ರಸ್ತಾವ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಡಾ.ಎಸ್.ಆಕಾಶ್, ಎಎಸ್‌ಪಿ ಶಿವಕುಮಾರ್, ದಿಶಾ ಸಮಿತಿ ನಾಮನಿರ್ದೇಶನ ಸದಸ್ಯರಾದ ಸಂತೋಷ್, ರಾಜಶೇಖರ್, ಲಕ್ಷ್ಮಣ್, ವೆಂಕಟಲಕ್ಷ್ಮಿ, ಗೋವಿಂದಪ್ಪ, ಭರತ್, ಕೆ.ಟಿ.ಕುಮಾರಸ್ವಾಮಿ, ಟಿ. ಮಂಜುಳಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.

ಅಧಿಕಾರಿಗಳು ಹಾಸ್ಟೆಲ್‌ ಊಟ ತಿನ್ನಲಿ

‘ಇತ್ತೀಚೆಗೆ ಹೊಸದುರ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಕಳಪೆ ಆಹಾರ ವಿತರಣೆ ಮಾಡುತ್ತಿರುವ ಬಗ್ಗೆ ದೂರಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮರ್ಪಕ ಸೌಲಭ್ಯ ದೊರೆಯುತ್ತಿಲ್ಲ.  ಒಳ್ಳೆಯ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ಅಧಿಕಾರಿಗಳು ಕೂಡ ಹಾಸ್ಟೆಲ್‌ ಊಟ ಮಾಡಬೇಕು’ ಎಂದು ಸಂಸದರು ಸೂಚನೆ ನೀಡಿದರು.

‘ಸರ್ಕಾರ ಸೌಲಭ್ಯ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮರ್ಪಕ ಸೌಲಭ್ಯ ದೊರೆಯುತ್ತಿಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ನಾನು ಜಿಲ್ಲೆಯ ಪ್ರವಾಸ ಸಂದರ್ಭದಲ್ಲಿ ಹಾಸ್ಟೆಲ್‍ನಲ್ಲಿಯೇ ಊಟ ಸೇವಿಸುತ್ತೇನೆ. ಕಳಪೆ ಕಂಡುಬಂದರೆ ಸ್ಥಳದಲ್ಲಿಯೇ ಅಮಾನತಿಗೆ ಕ್ರಮ ಜರುಗಿಸುತ್ತೇನೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.