ಧರ್ಮಪುರ: ಮಳೆಯಾಶ್ರಿತ ಸಾಂಪ್ರಾದಾಯಿಕ ಬೆಳೆಗಳಿಗೆ ಸೀಮಿತವಾಗಿದ್ದ ಹೋಬಳಿ ವ್ಯಾಪ್ತಿಯ ರೈತರು ಹೊಸ ಹೊಸ ಕೃಷಿ ಪದ್ಧತಿಯಡಿ ಪ್ರಯೋಗ ಮಾಡಿ ಯಶಸ್ವಿಯಾಗುತ್ತಿದ್ದಾರೆ. ಸಮೀಪದ ಬಳದಟ್ಟಿಯ ರೈತ ಕಾಂತರಾಜು ಅವರು ಜಂಬೂ ನೇರಳೆ ಬೆಳೆದು ಅಂಥವರ ಸಾಲಿಗೆ ಸೇರಿದ್ದಾರೆ.
ರೈತ ಕಾಂತರಾಜು ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದಿದ್ದರೂ ಕೃಷಿಯಲ್ಲಿನ ಅವರ ಅದಮ್ಯ ಉತ್ಸಾಹ, ತಾಂತ್ರಿಕತೆ ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅವರಲ್ಲಿನ ಛಲದಿಂದಾಗಿ 12 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದರು. ಮೊದಲು ಕೈಸುಟ್ಟುಕೊಂಡರೂ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದು ಇತರ ಹಣ್ಣು ಬೆಳೆದು ಯಶಸ್ವಿಯಾಗಿದ್ದಾರೆ.
20 ವರ್ಷಗಳಿಂದಲೂ ಕರಬೂಜ, ಕಲ್ಲಂಗಡಿ ಮತ್ತು ದಾಳಿಂಬೆ ಬೆಳೆದು ನಷ್ಟ ಅನುಭವಿಸಿದ್ದ ಅವರು ಕಳೆದುಕೊಮಡಲ್ಲೇ ಪಡೀಬೇಕು ಎಂಬ ಛಲದೊಂದಿಗೆ ತಮ್ಮ 58 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ. 12 ಎಕರೆಯಲ್ಲಿ ಕರಬೂಜ, 12 ಎಕರೆಯಲ್ಲಿ ಜಂಬೂ ನೇರಳೆ, 10 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ.
15 ಎಕರೆಯಲ್ಲಿ ಅಡಿಕೆ ತೋಟ, 8 ಎಕರೆಯಲ್ಲಿ ಶ್ರೀಗಂಧದ ಜೊತೆ ಮಿಶ್ರ ಬೆಳೆಯಾಗಿ ಸೀಬೆ ಗಿಡ ಹಾಕಿದ್ದಾರೆ. ಉಳಿದಂತೆ ನೀರು ಸಂಗ್ರಹಕ್ಕಾಗಿ 1 ಎಕರೆಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ನಾಟಿ ಮಾಡಿದ್ದ ಜಂಬೂ ನೇರಳೆ ಕಳೆದ ಎರಡು ವರ್ಷಗಳಿಂದ ಫಲ ನೀಡುತ್ತಿದೆ. ಕಳೆದ ವರ್ಷ ₹ 10 ಲಕ್ಷ, ಈ ವರ್ಷ ಸುಮಾರು ₹ 25 ಲಕ್ಷ ಆದಾಯ ಕಂಡಿರುವ ಅವರು ಮತ್ತಷ್ಟು ಉತ್ಸಾಹದಿಂದ ಕೃಷಿ ಮಾಡುತ್ತಿದ್ದಾರೆ.
12 ಎಕರೆಯಲ್ಲಿ ಕರಬೂಜ ಬೆಳೆದಿದ್ದು, ಈಗಾಗಲೇ ₹ 10 ಲಕ್ಷ ಆದಾಯ ಪಡೆದಿದ್ದಾರೆ. ಸೀಸನ್ ಮುಗಿಯುವುದರೊಳಗೆ ಕನಿಷ್ಟ ₹ 20 ಲಕ್ಷ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ತೋಟಗಳು ನಳನಳಿಸುತ್ತಿದ್ದು ಸುತ್ತಮುತ್ತಲ ಗ್ರಾಮಸ್ಥರಿಗೆ ಮಾದರಿಯಾಗಿವೆ.
ಜಂಬೂ ನೇರಳೆ ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಔಷಧಿ ಬಳಕೆ ಮಾಡುತ್ತಿಲ್ಲ. ಹೇರಳವಾಗಿ ಹಸಿರಿನ ಹುಲ್ಲು ಇರುವುದರಿಂದ ಕುರಿ ಸಾಕಾಣಿಕೆ ಮಾಡಿಕೊಂಡಿದ್ದಾರೆ. ತೋಟದಲ್ಲಿ ಬೆಳೆದು ನಿಂತಿರುವ ಹುಲ್ಲುತಿಂದ ಕುರಿಗಳು ಗೊಬ್ಬರ ಕೊಡುತ್ತವೆ. ಬೇವಿನ ಬೀಜದ ಗೊಬ್ಬರ ಮತ್ತು ಬೇವಿನ ಎಣ್ಣೆಯನ್ನು ಗಿಡಕ್ಕೆ ಸಿಂಪಡಿಸಿ ರಾಸಾಯನಿಕ ಮುಕ್ತ ವಾತಾವರಣ ನಿರ್ಮಿಸಿದ್ದಾರೆ.
ಇವರ ತೋಟಕ್ಕೆ ದೂರದ ಬೆಂಗಳೂರು, ತುಮಕೂರು, ಚಿತ್ರದುರ್ಗ ಮತ್ತು ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ವ್ಯಾಪಾರಸ್ಥರು ಬಂದು ಹಣ್ಣು ಖರೀದಿಸುತ್ತಾರೆ. ಸದ್ಯ ಜಂಬೂ ನೇರಳೆ ಸೀಸನ್ ಇದ್ದು ಹೊರರಾಜ್ಯಕ್ಕೂ ರವಾನೆಯಾಗುತ್ತಿವೆ.
15 ಎಕರೆಯಲ್ಲಿ ಸಮೃದ್ಧವಾದ ಅಡಿಕೆ ತೋಟವಿದ್ದು, ಈಗಾಗಲೇ ಇಳುವರಿ ಆರಂಭವಾಗಿದೆ. ಇದರಿಂದಲೂ ಒಂದು ವರ್ಷಕ್ಕೆ ಕನಿಷ್ಠ ₹ 20ರಿಂದ ₹ 25 ಲಕ್ಷ ಆದಾಯ ಬರುತ್ತಿದೆ. ಶ್ರೀಗಂಧದ ಜೊತೆ ಅಂತರ ಬೆಳೆಯಾಗಿ ಸೀಬೆ ನಾಟಿ ಮಾಡಲಾಗಿದೆ. ಉತ್ಕೃಷ್ಟವಾಗಿ ಶ್ರೀಗಂಧ ಬೆಳೆದಿದ್ದು, ಸೀಬೆಯ ಫಸಲು ಆರಂಭವಾಗಿದೆ.
ರೈತ ಎಚ್.ಬಿ.ಕಾಂತರಾಜು ಅವರ ಕೃಷಿ ಶ್ರಮದಲ್ಲಿ ಅವರ ಪತ್ನಿ ಸುಜಾತಾ ಆಸರೆಯಾಗಿ, ಪ್ರೇರಣೆಯಾಗಿದ್ದಾರೆ. ಇವರ ಸಂಪರ್ಕ ಸಂಖ್ಯೆ– 9902376293.
‘ಚಿತ್ರದುರ್ಗ ಜಿಲ್ಲೆಯ ಧರ್ಮಪುರ ಹೋಬಳಿಯು ಹಣ್ಣು ಮತ್ತು ತೋಟಗಾರಿಕಾ ಬೆಳೆಗಳಿಗೆ ಉತ್ತಮ ಹವಾಗುಣ ಹೊಂದಿದೆ. ರೈತರು ವಿವಿಧ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳಿಗೆ ಹೊರತಾಗಿ ಹಣ್ಣುಗಳನ್ನು ಬೆಳೆಯಲು ರೈತರು ಮುಂದಾಗಬೇಕು’ ಎಂದು ರೈತ ಎಚ್.ಬಿ.ಕಾಂತರಾಜು ಹೇಳುತ್ತಾರೆ. ‘ಆದರೆ ಸೂಕ್ತ ಮಾರುಕಟ್ಟೆಯಾಗಲೀ ಅಥವಾ ಹಣ್ಣು ಕೆಡದಂತೆ ಸಂರಕ್ಷಿಸುವ ಶೀಥಲೀಕರಣ ಘಟಕ ಇಲ್ಲದಿರುವುದು ರೈತರಿಗೆ ಅನನುಕೂಲ ಕಲ್ಪಿಸಿದೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸರ್ಕಾರದ ಮೇಲೆ ಒತ್ತಡ ಹೇರಿ ಈ ಭಾಗದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು’ ಎಂದು ರೈತ ಕಾಂತರಾಜು ಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.