ADVERTISEMENT

ಕಲಾವಿದರನ್ನು ನಿರ್ಲಕ್ಷಿಸುವುದು ನಾಚಿಕೆಗೇಡು: ಷಡಕ್ಷರಿ ಮುನಿ ಸ್ವಾಮೀಜಿ

‘ಜಾನಪದ ಜಗಲಿ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 9:00 IST
Last Updated 15 ಡಿಸೆಂಬರ್ 2018, 9:00 IST

ಚಿತ್ರದುರ್ಗ: ಆಳುವಂಥ ಸರ್ಕಾರಜಾನಪದ ಸೇರಿ ಯಾವುದೇ ಕಲಾವಿದರಾಗಿರಲಿ ಅವರನ್ನು ನಿರ್ಲಕ್ಷಿಸಿದರೆ, ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ಹಿರಿಯೂರು ಆದಿಜಾಂಬವ ಮಠದ ಷಡಕ್ಷರಿಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಶನಿವಾರ ಚಂದ್ರೋದಯ ಸಾಂಸ್ಕೃತಿಕ ಕಲಾಸಂಘ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿದ್ದ ‘ಜಾನಪದ ಜಗಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಾವಿದರ ಬದುಕು ನಿಜಕ್ಕೂ ಶೋಚನೀಯವಾಗಿದೆ. ಆದ್ದರಿಂದ ಅವರ ಮಾಸಾಶನದ ವಯಸ್ಸನ್ನು ಸಡಿಲಗೊಳಿಸುವ ಮೂಲಕ ಕಲಾವಿದರನ್ನು ಕೈಹಿಡಿಯುವ ಕೆಲಸ ಆಗಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ADVERTISEMENT

‘ಜಾನಪದ ಎಂಬುದು ನಮ್ಮೆಲ್ಲರ ಜೀವನ ಪದವಾಗಬೇಕು’ ಎಂದ ಅವರು, ‘ಯಾರು ಕಲೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತಾರೋ ಅದು ಕೂಡ ಅವರನ್ನು ಪ್ರೀತಿಸುತ್ತದೆ.ಕಲೆಗಳ ಉಳಿವಿಗಾಗಿ ಬಹುತೇಕ ಶ್ರಮಿಸುತ್ತಿರುವವರು ಶೋಷಿತರು, ಗಿರಿಜನರು, ದಲಿತರೇ ಆಗಿದ್ದಾರೆ. ಹಾಗಂತ ಶ್ರೀಮಂತರು ಮಾಡುತ್ತಿಲ್ಲ ಎಂದಲ್ಲ. ಅವರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿದೆ’ ಎಂದರು.

ಹೊಸದುರ್ಗ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ‘ದೇಶೀಯ ಮೂಲ ಸಂಸ್ಕೃತಿ ಹಾಗೂ ಗ್ರಾಮೀಣರ ಉಸಿರು ಜಾನಪದವಾಗಿದೆ. ಅದು ಎಲ್ಲ ಸಂಸ್ಕೃತಿಗೂ ತಾಯಿ ಬೇರು ಆಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಾಹಿತ್ಯವಷ್ಟೇ ನಮ್ಮ ಕ್ಷೇತ್ರ. ಜಾನಪದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂಥ ಅಪ್ರಬುದ್ಧ ಸಾಹಿತಿಗಳು ಸಮಾಜದಲ್ಲಿ ಇದ್ದಾರೆ. ಇಂತಹ ಧೋರಣೆ ಹೋಗದ ಹೊರತು ಕಲೆ, ಕಲಾವಿದರ ಬೆಳವಣಿಗೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಜಾನಪದ ಜಾಣರ ಕಲೆ. ಆದರೆ, ಇದನ್ನೇ ನಂಬಿರುವ ಕಲಾವಿದರ ಬದುಕು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ಇಂಥವರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಸದ ಚಂದ್ರಪ್ಪ, ಪ್ರಸ್ತುತ ದಿನಗಳಲ್ಲಿ ಜಾನಪದ ಸೊಗಡನ್ನು ಸಂಪೂರ್ಣ ಮರೆಯುತ್ತಿದ್ದೇವೆ. ಆಧುನಿಕತೆ ಭರಾಟೆ ಇದಕ್ಕೆ ಕಾರಣವಾಗಿದ್ದು, ಅದು ಎಂದಿಗೂ ಶಾಶ್ವತವಲ್ಲ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದರು.

ಜಾನಪದದಲ್ಲಿನ ಪ್ರತಿಯೊಂದು ಪದಕ್ಕೂ ಅರ್ಥವಿದೆ. ರಾಷ್ಟ್ರ, ನಾಡಿನ ಕುರಿತು ಗೌರವ ಮೂಡಿಸುವಂಥ ಅಂಶಗಳು ಇದರಲ್ಲಿರುತ್ತವೆ. ಮಾನವರ ನಡುವೆ ಯಾವ ರೀತಿಯ ಒಡನಾಟ ಇರಬೇಕು ಎಂಬುದನ್ನು ಸಹ ಕಲಿಸಿಕೊಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಟುಂಬದಲ್ಲಿ ಯಾವ ರೀತಿ ಹೊಡೆದಾಡಬೇಕು ಎಂಬುದನ್ನು ಧಾರಾವಾಯಿಗಳ ಮೂಲಕ ತೋರಿಸಲಾಗುತ್ತಿದೆ. ಅದರ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆಯೇ ಹೊರತು ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಜನ ಸೇರುವುದು ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಕಸಾಪ ಜಿಲ್ಲಾಧ್ಯಕ್ಷ ದೊಡ್ಡಮಲ್ಲಯ್ಯ, ಪ್ರಾಧ್ಯಾಪಕರಾದ ಡಾ.ಜೆ. ಕರಿಯಪ್ಪ ಮಾಳಿಗೆ, ಡಾ.ಕೆ.ಕೆ. ಕಾಮಾನಿ, ಶಿಕ್ಷಣ ಸಂಯೋಜಕ ಡಿ. ಗೋವಿಂದಪ್ಪ, ಕಲಾವಿದ ಡಿ.ಓ. ಮುರಾರ್ಜಿ, ದಾದಾಪೀರ್, ದಯಾನಂದ್, ಚಮನ್ ಷರೀಫ್ ಇದ್ದರು.ಇದೇ ಸಂದರ್ಭದಲ್ಲಿ ಅನೇಕ ಕಲಾವಿದರನ್ನೂ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.