ADVERTISEMENT

ಸಮಸ್ಯೆ ಬಗೆಹರಿಸದಿದ್ದರೆ ಸ್ವಯಂಪ್ರೇರಿತ ದೂರು: ನ್ಯಾಯಾಧೀಶ ರೋಣ ವಾಸುದೇವ್‌

ಡಯಾಲಿಸಿಸ್‌ ಕೇಂದ್ರಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:24 IST
Last Updated 6 ಡಿಸೆಂಬರ್ 2025, 8:24 IST
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ ವಾಸುದೇವ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ. ವಿಜಯ್‌ ಇದ್ದಾರೆ
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ ವಾಸುದೇವ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ. ವಿಜಯ್‌ ಇದ್ದಾರೆ   

ಚಿತ್ರದುರ್ಗ: ‘ನಿಮ್ಮಿಂದ ಯಾವುದೇ ವಿವರಣೆ ಕೇಳುವುದಿಲ್ಲ. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಯಾವುದೇ ಮುಲಾಜಿಲ್ಲದೆ ದೂರು ದಾಖಲಿಸುತ್ತೇವೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್‌.ಪಿ.ರವೀಂದ್ರ ಅವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಧೀಶ ರೋಣ ವಾಸುದೇವ್‌ ಎಚ್ಚರಿಕೆ ನೀಡಿದರು.

‘ಡಯಾಲಿಸಿಸ್‌ ಕೇಂದ್ರ; ಶೌಚಾಲಯವಿಲ್ಲ, ನೀರಿಲ್ಲ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿ ಗಮನಿಸಿದ ಅವರು, ಶುಕ್ರವಾರ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರಕ್ಕೆ ಭೇಟಿ ನೀಡಿದರು.

‘ಕೇಂದ್ರದಲ್ಲಿ ಹಲವು ತಿಂಗಳುಗಳಿಂದ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳಿಲ್ಲ ಎಂಬುದನ್ನು ಪತ್ರಿಕೆಗಳು ವರದಿ ಮಾಡುವ ತನಕ ನಿಮ್ಮ ಗಮನಕ್ಕೆ ಬಂದಿಲ್ಲವೇ? ಇಲ್ಲವೇ ನಾವು ಬಂದು ನಿಮಗೆ ತಿಳಿಸಬೇಕಾ’? ಎಂದು ಪ್ರಶ್ನಿಸಿದರು.

ADVERTISEMENT

‘ನಿಮ್ಮ ನಿರ್ಲಕ್ಷ್ಯದಿಂದ ಜಿಲ್ಲೆಯ ವಿವಿಧೆಡೆಯಿಂದ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಡಯಾಲಿಸಿಸ್‌ ಕೇಂದ್ರದಲ್ಲಿ ಶೌಚಾಲಯವಿಲ್ಲ ಎಂದರೆ ಆಶ್ಚರ್ಯವಾಗುತ್ತಿದೆ’ ಎಂದು ಕಿಡಿಕಾರಿದರು.

‘ಕಟ್ಟಡದ ಮೇಲೆ ಕಾಮಗಾರಿ ನಡೆಯುತ್ತಿರುವ ಕಾರಣ ಶೌಚಾಲಯದ ಪೈಪ್‌ಗಳು ಹಾಳಾಗಿವೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಗಮನಕ್ಕೆ ತಂದಿದ್ದೇವೆ. ಕೂಗಳತೆ ದೂರದಲ್ಲಿ ಶೌಚಾಲಯವಿದ್ದು ಅದನ್ನೂ ಬಳಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್‌.ಪಿ.ರವೀಂದ್ರ ಸಮಾಜಾಯಿಷಿ ನೀಡಿದರು.

ಇದರಿಂದ ಕೋಪಗೊಂಡ ರೋಣ ವಾಸುದೇವ್‌, ‘ಡಯಾಲಿಸಿಸ್‌ಗೆ ಒಳಗಾದ ವ್ಯಕ್ತಿ ನಿತ್ರಾಣಗೊಂಡಿರುತ್ತಾನೆ. ಅವರು ನಡೆದುಕೊಂಡು ಅಷ್ಟು ದೂರಕ್ಕೆ ಹೇಗೆ ಹೋಗಲು ಆಗುತ್ತದೆಯೇ? ವೈದ್ಯರಾಗಿ ನೀವೇ ಯೋಚಿಸಿ’ ಎಂದು ಪ್ರಶ್ನಿಸಿದರು.

‘ಇನ್ನೂ ಎರಡು ದಿನ ಕಾಲಾವಕಾಶ ನೀಡುತ್ತವೆ. ಅಷ್ಟರೊಳಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರಬೇಕು. ದಿನದ ಯಾವುದೇ ಸಮಯದಲ್ಲದರೂ ನಾವು ಬಂದು ಪರಿಶೀಲನೆ ಮಾಡುತ್ತೇವೆ. ಚಿಕ್ಕ ಲೋಪ ಕಂಡುಬಂದರೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಡಯಾಲಿಸಿಸ್‌ನ ಕೂಗಳತೆ ದೂರದಲ್ಲಿ ವೈದ್ಯಕೀಯ ತ್ಯಾಜ್ಯದಿಂದ ಕೆಟ್ಟ ವಾಸನೆ ಗಮನಿಸಿದ ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ. ವಿಜಯ್‌, ‘ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಜತೆಗೆ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.