ADVERTISEMENT

ಮೌಢ್ಯಕ್ಕೆ ಮಗು ಬಲಿ: ಮೌಢ್ಯ ನಿಷೇಧ ಕಾಯ್ದೆಯಡಿ ಇಬ್ಬರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 14:28 IST
Last Updated 13 ಏಪ್ರಿಲ್ 2022, 14:28 IST

ಚಿತ್ರದುರ್ಗ: ದೆವ್ವ ಬಿಡಿಸುವ ಪೂಜೆಯಲ್ಲಿ ಬೆತ್ತದಿಂದ ಹೊಡೆದ ಏಟಿಗೆ ಮೂರು ವರ್ಷದ ಬಾಲಕಿ ಮೃತಪಟ್ಟ ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಮೌಢ್ಯ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಬೆಳಕಿಗೆ ಬಂದ ಜಿಲ್ಲೆಯ ಮೊದಲ ಪ್ರಕರಣದಲ್ಲಿ ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಅಜ್ಜಿಕ್ಯಾತನಹಳ್ಳಿಯ ರಾಕೇಶ್‌ ಹಾಗೂ ಪರಶುರಾಮ ಶಿಕ್ಷೆಗೆ ಗುರಿಯಾದ ಸಹೋದರರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮನಗೋಲಿ ಪ್ರಮಾವತಿ ಆದೇಶ ಹೊರಡಿಸಿದ್ದಾರೆ.

ಅಜ್ಜಿಕ್ಯಾತನಹಳ್ಳಿಯ ರಾಕೇಶ್‌ ಹಾಗೂ ಪರಶುರಾಮ ಸಹೋದರರ ಗುಡಿಸಲು ಮುಂಭಾಗದಲ್ಲಿ ಹುತ್ತ ಬೆಳೆದಿತ್ತು. ಅರಿಶಿನ, ಕುಂಕುಮ ಬಳಸಿ ಇಬ್ಬರು ನಿತ್ಯ ಪೂಜೆ ಮಾಡುತ್ತಿದ್ದರು. ರಾಕೇಶ್‌ ಮೈಮೇಲೆ ಉಚ್ಚಂಗಿ ಎಲ್ಲಮ್ಮ ದೇವರು ಬರುತ್ತದೆ ಎಂದು ಪರಶುರಾಮ ಗ್ರಾಮಸ್ಥರಲ್ಲಿ ನಂಬಿಸಿದ್ದನು. ದೆವ್ವ, ಭೂತ ಬಿಡಿಸುವುದಾಗಿ ಹೇಳಿಕೊಂಡಿದ್ದರು. ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಕಾಯಿಲೆಗಳು ವಾಸಿಯಾಗುತ್ತವೆ ಎಂದು ಜನರಲ್ಲಿ ಮೂಢನಂಬಿಕೆ ಬಿತ್ತಿದ್ದರು.

ADVERTISEMENT

ಇದೇ ಗ್ರಾಮದ ಪ್ರವೀಣ್‌ ಹಾಗೂ ಶಾಮಲಾ ದಂಪತಿಯ ಮೂರು ವರ್ಷದ ಪುತ್ರಿ ಪೂರ್ವಿಕಾ ತೀರಾ ಹಠ ಮಾಡುತ್ತಿದ್ದಳು. ಸರಿಯಾಗಿ ಊಟ ಮಾಡದೇ ಕಿರಿಕಿರಿ ಮಾಡುತ್ತಿದ್ದಳು. ಇವರನ್ನು ಸಂಪರ್ಕಿಸಿದ ಪರಶುರಾಮ, ಮಗುವಿಗೆ ದೆವ್ವ ಹಿಡಿದಿರುವುದಾಗಿ ನಂಬಿಸಿದ್ದನು. ರಾಕೇಶ್‌ ಮೈಮೇಲೆ ಬರುವ ದೇವರು, ದೆವ್ವ ಬಿಡಿಸುತ್ತದೆ ಎಂಬುದಾಗಿ ನಂಬಿಸಿದ್ದನು. 2020ರ ಸೆ.27ರಂದು ಪೂಜೆಗೆ ವ್ಯವಸ್ಥೆ ಮಾಡಿಕೊಂಡಿದ್ದರು.

ಗುಡಿಸಲಿನಲ್ಲಿ ಮಗುವಿಗೆ ಪೂಜೆ ಮಾಡುವುದಾಗಿ ಪೋಷಕರನ್ನು ಹೊರಗೆ ಕಳುಹಿಸಿದ್ದರು. ಮಗು ನಿತ್ರಾಣಗೊಂಡ ಬಳಿಕ ಹೊರಗೆ ಕರೆತಂದು ನೀರು ಚಿಮುಕಿಸಿದ್ದರು. ಬೆತ್ತದ ಏಟು ಮೈಮೇಲೆ ಬಿದ್ದಿರುವುದನ್ನು ಗಮನಿಸಿದ ಪೋಷಕರು ಆತಂಕಗೊಂಡಿದ್ದರು. ಬಲವಾದ ಏಟಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಮಗು ಪ್ರಾಣಬಿಟ್ಟಿತ್ತು. ಮೌಢ್ಯ ನಿಷೇಧ ಕಾಯ್ದೆ–2017ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಹೊಳಲ್ಕೆರೆಯ ಸಿಪಿಐ ಕೆ.ಎನ್‌.ರವೀಶ್‌ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಪ್ರಧಾನ ಅಭಿಯೋಜಕ ಬಿ.ಗಣೇಶ ನಾಯ್ಕ್‌ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.