ADVERTISEMENT

ಕಾಂಗ್ರೆಸ್‌ನಲ್ಲಿ ಕಣ್ಣಾಮುಚ್ಚಾಲೆ, ಹಾವು–ಏಣಿ ಆಟ: ಸಚಿವ ಬಿ. ಶ್ರೀರಾಮುಲು ಟೀಕೆ

ಜಿಲ್ಲೆಯ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಟೀಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:47 IST
Last Updated 5 ಡಿಸೆಂಬರ್ 2021, 5:47 IST
ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ 
ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ    

ಚಿತ್ರದುರ್ಗ: ‘ಕಾಂಗ್ರೆಸ್‌ನಲ್ಲಿ ಕಣ್ಣಾಮುಚ್ಚಾಲೆ, ಹಾವು–ಏಣಿ, ಜಂಗಿಕುಸ್ತಿ ಪಂದ್ಯ, ಬಯಲಾಟ ಆರಂಭವಾಗಿದೆ. ದೇಶದಲ್ಲಿ ವಿರೋಧ ಪಕ್ಷದ ಸ್ಥಾ‌ನ ಕಳೆದುಕೊಳ್ಳುವ ಭೀತಿ ಆ ಪಕ್ಷದ ನಾಯಕರನ್ನು ಕಾಡುತ್ತಿದೆ’ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಛೇಡಿಸಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‘ಎ’ ತಂಡದ ನಾಯಕರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ‘ಬಿ’ ತಂಡದ ನಾಯಕರ ಗುಂಪಿನಲ್ಲಿದ್ದಾರೆ. ಯಾವ ತಂಡ ಗೆಲ್ಲುತ್ತದೆಯೋ ಎಂದು ಜನ ಕಾದು ನೋಡುವಂತಾಗಿದೆ’ ಎಂದು ಕುಟುಕಿದರು.

‘ಕಾಂಗ್ರೆಸ್ ನಾಯಕರ ತಟ್ಟೆಯಲ್ಲಿ ಹೆಗ್ಗಣ ಬಿದಿದ್ದರೂ, ನೋಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಿಜೆಪಿ ದೇಶದಲ್ಲಿ ಸದೃಢವಾಗಿದ್ದರೂ ಸುಮ್ಮನೆ ದೂರುತ್ತಿದ್ದಾರೆ. ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿದ್ದಾರೆ’ ಎಂದು ಶ್ರೀರಾಮುಲು ಅವರು ಕಾಂಗ್ರೆಸ್ ಮುಖಂಡರ ಆರೋಪಗಳಿಗೆ ತಿರುಗೇಟು ನೀಡಿದರು.

ADVERTISEMENT

15ಕ್ಕೂ ಹೆಚ್ಚು ಸ್ಥಾನ: ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ. ಕಾಂಗ್ರೆಸ್ ನಾಯಕರು ಎಷ್ಟೇ ಸುಳ್ಳು ಹೇಳಿದರು ಬಳ್ಳಾರಿ, ಚಿತ್ರದುರ್ಗ ಗೆಲ್ಲುತ್ತೇವೆ. ದಾವಣಗೆರೆ–ಚಿತ್ರದುರ್ಗ ಕ್ಷೇತ್ರದಿಂದ ಎರಡು ಬಾರಿ ಗೆದ್ದ ರಘು ಆಚಾರ್ ಏನೂ ಕೆಲಸ ಮಾಡಿಲ್ಲ. ಎರಡು ಬಾರಿ ಸೋತು ಮೂರನೇ ಬಾರಿ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ನವೀನ್ ಪರ ಮತದಾರರ ಒಲವು ಹೆಚ್ಚಾಗಿದೆ. ಅವರ ಗೆಲುವಿಗೆ ಪಕ್ಷದ ಎಲ್ಲರೂ ಶ್ರಮಿಸುತ್ತಿದ್ದೇವೆ’ ಎಂದರು.

ಕೋವಿಡ್ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ. ಕಾಂಗ್ರೆಸ್ ಆರೋಪಗಳಿಗೆ ಈಗಾಗಲೇ ಉತ್ತರ ನೀಡಿದ್ದೇವೆ. ಪುನಃ ಈ ವಿಚಾರದಲ್ಲಿ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದರು.

‘ಯಡಿಯೂರಪ್ಪ ಕಣ್ಣೀರು ಸುರಿಸಿದ್ದರಿಂದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಕಡೆ ಸೋಲು ಉಂಟಾಯಿತು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಆದರೆ, ಅದು ದುಃಖದ ಕಣ್ಣೀರಲ್ಲ. ಆನಂದ ಬಾಷ್ಪ. ಇದನ್ನು ಖುದ್ದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಪಕ್ಷಕ್ಕಾಗಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅವರು ಎಂದೆಂದಿಗೂ ನಮ್ಮ ನಾಯಕರೇ’ ಎಂದು ಪ್ರತಿಕ್ರಿಯಿಸಿದರು.

‘ಓಮೈಕ್ರಾನ್‌ ಕುರಿತು ಮುಖ್ಯಮಂತ್ರಿ ತಜ್ಞರ ಜತೆ ಸಭೆ ನಡೆಸಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಬೂಸ್ಟರ್‌ ಡೋಸ್ ಕುರಿತು ಚರ್ಚಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲೂ ನಿಗಾವಹಿಸಲು ಕ್ರಮವಹಿಸಲಾಗಿದೆ’ ಎಂದರು.

ಸಚಿವ ಸಂಪುಟ ಬದಲಾವಣೆ ಕುರಿತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಲಾರೆ. ಕಾರಣ ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.