ADVERTISEMENT

ನ್ಯಾಯವನ್ನು ಪ್ರತಿಪಾದಿಸುವ ಗುರು ಪೀಠ: ಮಾದಾರ ಚನ್ನಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:34 IST
Last Updated 8 ನವೆಂಬರ್ 2025, 6:34 IST
ಹೊಸದುರ್ಗದ ಕೆಲ್ಲೋಡಿನ ಕನಕ ಗುರುಪೀಠದಲ್ಲಿ ಶುಕ್ರವಾರ ಆಯೋಜಿಸಿದ್ದ ಟಗರು ಕಾಳಗವನ್ನು ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು
ಹೊಸದುರ್ಗದ ಕೆಲ್ಲೋಡಿನ ಕನಕ ಗುರುಪೀಠದಲ್ಲಿ ಶುಕ್ರವಾರ ಆಯೋಜಿಸಿದ್ದ ಟಗರು ಕಾಳಗವನ್ನು ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮೀಜಿ ಉದ್ಘಾಟಿಸಿದರು   

ಹೊಸದುರ್ಗ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠವು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮೂಲಕ ಎಲ್ಲ ವರ್ಗದವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಶೋಷಿತ ವರ್ಗಗಳ ಅಭ್ಯುದಯಕ್ಕೆ ಕಾಗಿನೆಲೆ ಮಹಾ ಸಂಸ್ಥಾನ ಬೆನ್ನಲುಬಾಗಿ ನಿಂತಿದೆ ಎಂದು ಚಿತ್ರದುರ್ಗ ಮಾದಾರ ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಕನಕ ಗುರುಪೀಠದಲ್ಲಿ ಕನಕ ಜಯಂತ್ಯುತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಟಗರು ಕಾಳಗಕ್ಕೆ ಚಾಲನೆ ನೀಡಿ ಮಾತನಾಡಿದರು.

ವೇದಾವತಿ ನದಿ ತಟದಲ್ಲಿ ಕನಕ ಮಹೋತ್ಸವವನ್ನು ವಿಶೇಷವಾಗಿ ಅರ್ಥ ಪೂರ್ಣವಾಗಿ ಆಚರಿಸಲಾತ್ತಿದೆ ಎಂದರು.

ADVERTISEMENT

ಗ್ರಾಮದ ಪ್ರತಿ ಮನೆ ಮನೆಯಲ್ಲೂ ಕನಕದಾಸರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಕಲಾ ಮೇಳಗಳೊಂದಿಗೆ ಕೀರ್ತನೆಗಳನ್ನು ಭಜಿಸುವ ಮೂಲಕ ಆಚರಿಸಲಾಗುತ್ತಿದೆ. ಕನಕದಾಸರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಪಾಲಿಸುವಂತಾಗಬೇಕು ಎಂದು ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ಟಗರು ಕಾಳಗ ಬಹಳಷ್ಟು ಜನರನ್ನು ಮನಸೂರೆಗಳಿಸಿದೆ. ಲಕ್ಷ ದೀಪೋತ್ಸವ ಆಚರಿಸುವ ಮೂಲಕ ಕನಕದಾಸರ ತತ್ವಾದರ್ಶಗಳನ್ನು ಭಕ್ತರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗುತ್ತಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.  

ಕನಕ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಚ್. ಹನುಮಂತಪ್ಪ, ಟಿಎಪಿಎಂಸಿ ನಿಕಟ ಪೂರ್ವ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಸೇವಾದಳದ ಅಧ್ಯಕ್ಷ ತಾಲ್ಲೂಕು ಎಂ.ಆರ್.ಸಿ ಮೂರ್ತಿ, ರೇವಣ ಸಿದ್ದೇಶ್ವರ ಮಠದ ಅಧ್ಯಕ್ಷ ಮಂಜಣ್ಣ, ಅರುಣ್ ಗೋವಿಂದಪ್ಪ, ಕೆ. ಟಿ. ಮಂಜುನಾಥ್, ಗಂಗಾಧರ್, ಬನಸೀಹಳ್ಳಿ ಅಜ್ಜಪ್ಪ, ಗುತ್ತಗೆದಾರ ಬಾಗೂರು ರಮೇಶ್, ಶಾಂತಮೂರ್ತಿ, ಕೆ. ಟಿ. ಮಂಜುನಾಥ್, ಕಾರೇಹಳ್ಳಿ ರಂಗನಾಥ್, ವೆಂಕಟೇಶ್, ಫಯಾಜ್, ಮಂಜುನಾಥ್ ಒಡೆಯರ್, ಲೋಹಿತ್, ವೆಂಕಟೇಶ್, ಮಂಜು ಡೖರು ಮಾರ್ಟ್ ರಾಘವೇಂದ್ರ, ಅಶೋಕ್, ಗೋವಿಂದರಾಜು ಇದ್ದರು.

ಟಗರು ಕಾಳಗದಲ್ಲಿ ದಾವಣಗೆರೆ, ಹಾವೇರಿ, ತುಮಕೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಟಗರುಗಳು ಆಗಮಿಸಿದ್ದು, ಕಾಳಗ ವೀಕ್ಷಿಸಲು ಭಾರಿ ಜನಸ್ತೋಮ ಸೇರಿತ್ತು.

ಸುರೇಶ್ ಬಾಬು

ಕನಕ ಜಯಂತ್ಯುತ್ಸವದಲ್ಲಿ ಇಂದು

ಕನಕ ಮಠದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕೃಷಿ ಮೇಳದಲ್ಲಿ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಚಿಕ್ಕಮಗಳೂರು ಬಸವತತ್ವ ಪೀಠದ ಮರುಳಸಿದ್ಧ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಬಿ.ಜಿ. ಗೋವಿಂದಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು.

‘ಸಿರಿಧಾನ್ಯಗಳ ಸಿರಿ’ ವಿಚಾರ ಸಂಕಿರಣ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್ ಉಪಕೃಷಿ ನಿರ್ದೇಶಕ ಕೆ.ಎಸ್. ಶಿವಕುಮಾರ್ ಚಳ್ಳಕೆರೆ ಉಪ ಕೃಷಿ ನಿರ್ದೇಶಕ ಉಮೇಶ್ ತಹಶೀಲ್ದಾರ್ ತಿರುಪತಿ ಪಾಟೀಲ್ ತಾ.ಪಂ ಇಒ ಸುನೀಲ್ ಕುಮಾರ್ ಭಾಗವಹಿಸುವರು.

ಮಧ್ಯಾಹ್ನ 2 ಗಂಟೆಗೆ ಹೊಸದುರ್ಗದ ಟಿ.ಬಿ. ವೃತ್ತದಿಂದ ಕನಕದಾಸರ ಬೆಳ್ಳಿ ರಥದ ಉತ್ಸವವು 101 ಮಹಿಳೆಯರ ಪೂರ್ಣಕುಂಭ ಡೊಳ್ಳು ಕುಣಿತ ವೀರಗಾಸೆ ಜಾನಪದ ಕಲಾಮೇಳಗಳೊಂದಿಗೆ ಹೊಸದುರ್ಗದ ಮುಖ್ಯ ರಸ್ತೆಯಲ್ಲಿ ನಡೆಯಲಿದೆ.

ಸಂಜೆ 6 ಗಂಟೆಗೆ 20ಕ್ಕೂ ಅಧಿಕ ಮಠಾಧೀಶರ ಸಮ್ಮುಖದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ವೇದಿಕೆ ಕಾರ್ಯಕ್ರಮ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸುವರು. ಮಾಜಿ ಸಚಿವ ರೇವಣ್ಣ ಶಾಸಕರುಗಳಾದ ಬಿ.ಜಿ ಗೋವಿಂದಪ್ಪ ಸಿ.ಬಿ. ಸುರೇಶ್ ಬಾಬು ಜಿ.ಎಚ್ ಶ್ರೀನಿವಾಸ್ ಕೆ.ಎಸ್. ಆನಂದ್ ಕುಲಪತಿ ಬಿ.ಕೆ. ರವಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

ರಾತ್ರಿ 8 ಗಂಟೆಗೆ ಮಂಜುಳಾ ವೈ.ಡಿ. ಬಾದಾಮಿ ನಿರ್ದೇಶನದ ‘ಕನಕ ದರ್ಶನ’ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ.

‘ಮಹನೀಯರನ್ನು ಜಾತಿಗೆ ಸೀಮಿತಗೊಳಿಸಿಬಾರದು’

12ನೇ ಶತಮಾನದಲ್ಲಿ ವಚನಕಾರರು ನಂತರ ಬಂದ ದಾಸ ಶ್ರೇಷ್ಠರು ಕೀರ್ತನೆ ತತ್ವಪದಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಕನಕದಾಸರ ಕೀರ್ತನೆಗಳು ಎಂದೆಂದಿಗೂ ಜನಜನಿತವಾಗಿವೆ. ಅವರು ಕುಲ ಕುಲ ಎಂದು ಹೊಡೆದಾಡದಿರಿ ಎಂದು ಅಂದೇ ಹೇಳಿದ್ದರು. ದಾಸರ ಜಯಂತಿ ಮಾಡುವಾಗ ಅವರ ಆದರ್ಶಗಳನ್ನು ಪಾಲಿಸಬೇಕು. ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಿಬೇಡಿ. ಬಸವಣ್ಣ ಅಂಬೇಡ್ಕರ್ ಕನಕದಾಸರು ಸೇರಿದಂತೆ ಹಲವಾರು ಗಣ್ಯರು ಹೇಳಿರುವ ದಾರಿಯಲ್ಲಿ ಸಾಗಬೇಕು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ. ಜಯಂತಿಗಳು ಸಂಘಟನೆಯಾಬೇಕು. ಕನಕದಾಸರ ಆದರ್ಶ ಪಾಲನೆಯಾಗಬೇಕು. ಅನ್ಯಜಾತಿಯವರೊಂದಿಗೆ ಸಹೋದರತ್ವ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಹಿರಿಯೂರು ತಾಲ್ಲೂಕು ಘಟಕದ ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.