ADVERTISEMENT

ಚಿತ್ರದುರ್ಗ | ಕನ್ನಡದತ್ತ ಯುವ ಸಮೂಹ ಸೆಳೆಯಬೇಕು

ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಮರ್ಶಕಿ ತಾರಿಣಿ ಶುಭದಾಯಿನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಮೇ 2022, 13:14 IST
Last Updated 5 ಮೇ 2022, 13:14 IST
ಚಿತ್ರದುರ್ಗದ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಪ್ರಾಂಶುಪಾಲ ಈ.ರುದ್ರಮುನಿ, ಮುಖ್ಯ ಶಿಕ್ಷಕ ಹುರುಳಿ ಬಸವರಾಜ್‌ ಇದ್ದಾರೆ.
ಚಿತ್ರದುರ್ಗದ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಮರ್ಶಕಿ ತಾರಿಣಿ ಶುಭದಾಯಿನಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಪ್ರಾಂಶುಪಾಲ ಈ.ರುದ್ರಮುನಿ, ಮುಖ್ಯ ಶಿಕ್ಷಕ ಹುರುಳಿ ಬಸವರಾಜ್‌ ಇದ್ದಾರೆ.   

ಚಿತ್ರದುರ್ಗ: ವಸಾಹತೋತ್ತರ ಕಾಲದಲ್ಲಿ ಕನ್ನಡ ಭಾಷೆಗೆ ಎದುರಾಗಿರುವ ಸವಾಲುಗಳನ್ನು ಇನ್ನಷ್ಟು ಕ್ರಿಯಾಶೀಲವಾಗಿ ಎದುರಿಸಬೇಕು. ಯುವ ಸಮೂಹ ಕನ್ನಡದ ಕಡೆಗೆ ಅಭಿಮುಖಗೊಳ್ಳುವಂತೆ ಮಾಡಬೇಕು ಎಂದು ವಿಮರ್ಶಕಿ ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.

ಇಲ್ಲಿನ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗುರುವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 108ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಕನ್ನಡ ಮನಸುಗಳ ಮೇಲೆ ಕಸಾಪ ಬೀರಿದ ಪ್ರಭಾವ’ ಕುರಿತು ಅವರು ಮಾತನಾಡಿದರು.

‘ಬ್ರಿಟಿಷ್‌ ವಸಾಹತು ವ್ಯವಸ್ಥೆಗೆ ಕನ್ನಡನಾಡು ಸಿಲುಕಿದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿತು. ವಸಾಹತು ವ್ಯವಸ್ಥೆ ಅಂತ್ಯಗೊಂಡ ಬಳಿಕ ಕನ್ನಡ ನಾಡು, ಕನ್ನಡಿಗರ ಎದುರು ಹೊಸ ಸವಾಲುಗಳು ಎದುರಾದವು. ಗಡಿಯ ವಿಚಾರವನ್ನು ಇನ್ನೂ ಬಗೆಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಡಳಿತದಲ್ಲಿ ಕನ್ನಡ ಭಾಷೆ, ಪರಭಾಷಿಕರ ಸಮಸ್ಯೆ, ಉದ್ಯೋಗ ಹೀಗೆ ಹಲವು ಸವಾಲುಗಳು ಎದುರಾಗಿವೆ’ ಎಂದರು.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದ ಪರಿಣಾಮವಾಗಿ ಕನ್ನಡ ನಾಡು ಕಟ್ಟಲು ಸಾಧ್ಯವಾಗಿದೆ. ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಸಾಹಿತ್ಯ ರೂಪುಗೊಂಡಿದೆ. ಕನ್ನಡ ಭಾಷೆಯನ್ನು ಇನ್ನಷ್ಟು ಜೀವಂತಗೊಳಿಸುವ ನಿಟ್ಟಿನಲ್ಲಿ ಆಲೋಚಿಸಬೇಕಿದೆ. ಕನ್ನಡ ಉಲಿಗೆ ಗ್ರಾಂಥಿಕ ಸ್ವರೂಪ ನೀಡಲು ಸಾಧ್ಯವೆ ಎಂಬುದನ್ನು ಪರಿಶೀಲಿಸಬೇಕಿದೆ. ಸಾಹಿತ್ಯ ಸಮ್ಮೇಳನದಂತಹ ವಿಜೃಂಭಣೆಯ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.

‘ಬ್ರಿಟಿಷರ ಆಡಳಿತದಲ್ಲಿ ಕನ್ನಡ ನಾಡು ಹಂಚಿ ಹೋಗಿತ್ತು. ಈಗಿನ ಉತ್ತರಕರ್ನಾಟಕ, ಹೈದರಾಬಾದ್‌ ಹಾಗೂ ಮುಂಬೈ ಪ್ರಾಂತ್ಯಗಳಿಗೆ ಸೇರಿ ತಬ್ಬಲಿತನ ಅನುಭವಿಸುತ್ತಿತ್ತು. ಕನ್ನಡ ಭಾಷೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪಿಸಿದರು. ರಾಜಾಶ್ರಯ ಪಡೆದಿದ್ದರೂ ಸರ್ಕಾರೇತರ ಸಂಸ್ಥೆಯಾಗಿ ರೂಪುಗೊಂಡಿತು’ ಎಂದು ವಿವರಿಸಿದರು.

‘ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಬಿಎಂಶ್ರೀ, ಅನಾಕೃ ಸೇರಿ ಸಾಹಿತ್ಯ ಲೋಕದ ದಿಗ್ಗಜರು ಪರಿಷತ್ತು ಕಟ್ಟಲು ಶ್ರಮಿಸಿದ್ದಾರೆ. ಆರೇಳು ದಶಕಗಳ ಕಾಲ ಅತ್ಯುತ್ತಮವಾಗಿ ಕೆಲಸ ಮಾಡಿದ ಸಂಸ್ಥೆ ಕನ್ನಡಿಗರ ಜೀವನದ ಭಾಗವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಘನತೆ ತಂದುಕೊಟ್ಟಿದೆ. ಕನ್ನಡ ಮತ್ತು ಸಂಸ್ಕೃತಿಗೆ ಪ್ರತ್ಯೇಕ ಇಲಾಖೆ, ವಿಶ್ವವಿದ್ಯಾಲಯ, ಅಕಾಡಮಿಗಳಿದ್ದರೂ ಸಾಹಿತ್ಯ ಪರಿಷತ್ತಿನ ಕಾರ್ಯವೇ ಭಿನ್ನ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಈ.ರುದ್ರಮುನಿ, ಮುಖ್ಯ ಶಿಕ್ಷಕ ಹುರುಳಿ ಬಸವರಾಜ್‌ ಇದ್ದರು.

***

ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯವ ಕೆಲಸ ಮಾಡಬೇಕಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸುವ ಅಗತ್ಯವಿದೆ.
-ಇ.ಬಾಲಕೃಷ್ಣ,ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.