ಧರ್ಮಪುರ: ಹೋಬಳಿಯಲ್ಲಿ ಗುರುವಾರ ಸಂಜೆ ಗುಡುಗು ಮಿಂಚು, ಸಿಡಿಲಿನ ಅಬ್ಬರ ಜೋರಾಗಿತ್ತು. ಬಿರುಗಾಳಿ ಸಹಿತ ಹದ ಮಳೆ ಸುರಿಯಿತು. ಪರಿಣಾಮವಾಗಿ ಸಮೀಪದ ವೇಣುಕಲ್ಲುಗುಡ್ಡದಲ್ಲಿ ಮನೆಯ ಚಾವಣಿ, ಬಾಳೆ ಮತ್ತು ಪಪ್ಪಾಯ ಗಿಡಗಳು ನೆಲಕ್ಕುರುಳಿ ಅಪಾರ ನಷ್ಟ ಸಂಭವಿಸಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳ ಚಾವಣಿ ಗಾಳಿಗೆ ಹಾರಿ ಹೋಗಿದೆ. ಶಾಲೆಯ ಮೈದಾನ ಮತ್ತು ಬೇರೆಡೆ ಹತ್ತು ಮರಗಳು ನೆಲಕ್ಕುರುಳಿವೆ. ನಾಲ್ಕೈದು ವಿದ್ಯುತ್ ಕಂಬಗಳು ಮುರಿದಿವೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಕೃಷ್ಣಪ್ಪನವರ 1,000 ಪಪ್ಪಾಯ ಗಿಡಗಳು, 2,000 ಬಾಳೆ ಗಿಡಗಳು ನೆಲಕ್ಕುರುಳಿವೆ.
ಹೂವಿನಹೊಳೆಯಲ್ಲಿ ಸಣ್ಣಕೆಂಚಪ್ಪ ಅವರ 2,000 ಪಪ್ಪಾಯ ಗಿಡಗಳು, ಬ್ಯಾಡರಹಳ್ಳಿಯಲ್ಲಿ ರಾಜಣ್ಣನವರ ಅಡಿಕೆ ಗಿಡಗಳು, ದೇವರಕೊಟ್ಟ ಜೋಗಣ್ಣನವರ 45 ಅಡಿಕೆ ಗಿಡಗಳು, ಅರಳೀಕೆರೆಯಲ್ಲಿ ಹನುಮಂತಪ್ಪನವರ ಮನೆ, ಕಣಜನಹಳ್ಳಿ ಮತ್ತು ಬೇತೂರು ಗ್ರಾಮದಲ್ಲಿ ಅಡಿಕೆ ಗಿಡಗಳು ನೆಲಕ್ಕುರುಳಿವೆ.
ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಈಶ್ವರಗೆರೆ ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.